ಆನಂದಪುರ: ರಾಜ್ಯದ ಸರ್ಕಾರ ರೈತರ ಎಲ್ಲ ಬಗೆಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ಅಡಕೆಗೆ ಎಲೆಚುಕ್ಕೆ ರೋಗ, ಅತಿವೃಷ್ಟಿಯಿಂದ ಬೆಳೆಗಳಿಗೆ ಉಂಟಾದ ಕೊಳೆ, ಫಸಲು ನಷ್ಟ, ಪರಿಹಾರ ಕ್ರಮ ಯಾವುದರ ಬಗ್ಗೆಯೂ ಗಮನಹರಿಸುತ್ತಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ದೂರಿದರು.
ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಚರ್ಚಾ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದು ಶೇ.80ರಷ್ಟು ಬೆಳೆ ಹಾನಿಯಾಗಿದ್ದರೂ ಪರಿಹಾರ ಘೋಷಿಸಿಲ್ಲ. ರೈತರ ಸಮಸ್ಯೆ ಬಗೆಹರಿಸಬೇಕಾದ ಮುಖ್ಯಮಂತ್ರಿ ಹಾಗೂ ಸಚಿವರು ಬಿಹಾರದ ಚುನಾವಣೆಗಾಗಿ ಪ್ರವಾಸ ನಡೆಸುತ್ತಿದ್ದಾರೆ. ರಾಜ್ಯದ ಜನತೆಯ ತೆರಿಗೆ ಹಣದಿಂದ ಭೋಜನಕೂಟ ಏರ್ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕಾಗಿ ಹತ್ತಾರು ಯೋಜನೆ ಜಾರಿಗೆ ತಂದಿದೆ. ಅವುಗಳ ಪ್ರಯೋಜನ ಪಡೆಯಲು ಬೇಕಾದ ಮಾರ್ಗದ ಬಗ್ಗೆ ಗ್ರಾಮೀಣ ರೈತರಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗ ನಿಂಬೆಗೊಂದಿ, ಪ್ರಧಾನ ಕಾರ್ಯದರ್ಶಿ ಕುಮಾರ ನಾಯ್ಡು, ಪ್ರಮುಖರಾದ ಟಿ.ಡಿ.ಮೇಘರಾಜ್, ಗಣೇಶ ಬಿಳಕಿ, ಗಂಗಾಧರ ಇತರರಿದ್ದರು. ಜಿಲ್ಲೆಯ ವಿವಿಧೆಡೆಯಿಂದ 200ಕ್ಕೂ ಅಕ ರೈತರು ಪಾಲ್ಗೊಂಡಿದ್ದರು.