ಕಳಸ: ಸದನದೊಳಗೆ ಎಂಎಲ್‌ಸಿಯನ್ನು ಕರೆದುಕೊಂಡು ಹೋಗಲು ಪೊಲೀಸರು ಹೋಗಿರುವುದು ಊಹೆ ಮಾಡಲೂ ಆಗುವುದಿಲ್ಲ. ತುರ್ತು ಪರಿಸ್ಥಿತಿಯಲ್ಲೂ ಹೀಗೆ ಆಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷವಾಗಿ ನಾವು ಹೋರಾಟ ಮಾಡಬೇಕು. ಕರ್ನಾಟಕದಲ್ಲಿ ಸೂಕ್ಷ್ಮರಾಜಕಾರಣ ನಡೆಯುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೌರ್ಜನ್ಯ ನಡೆಸುತ್ತಿದೆ. ಸರ್ಕಾರ ದೌರ್ಜನ್ಯ ಮಾಡುವುದು ಕೀಳು ಮಟ್ಟದ ನಡವಳಿಕೆ. ಎಲ್ಲ ಜಿಲ್ಲೆಗಳಲ್ಲಿ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ. ಇದು ಯಾವ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದೇನೆ ಎಂದರು.
ಅನ್ನ ಭಾಗ್ಯ ಕೊಟ್ಟಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ಸರ್ಕಾರ, ಒಂದು ತಿಂಗಳಿಗೆ ಕೇಂದ್ರ ಸರ್ಕಾರ 22 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಕೊಡುತ್ತಿರುವ ಬಗ್ಗೆ ಎಲ್ಲೂ ಹೇಳುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸರ್ಫೇಸಿ ಕಾಯ್ದೆಯಡಿ 850 ಜನರ ಪಟ್ಟಿ ಸಿದ್ಧವಿತ್ತು. ಕೇಂದ್ರದ ಹಣಕಾಸು ಮಂತ್ರಿಗಳ ಗಮನಕ್ಕೆ ವಿಚಾರ ತಂದಾಗ ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡುವುದಾಗಿ ಕೇಂದ್ರದಿಂದ ನನಗೆ ಭರವಸೆ ಸಿಕ್ಕಿತು. ಆದ್ದರಿಂದ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತನಾಡಿದಾಗ, ಬಾಕಿ ಇರುವ ಸಾಲ ಮರುಪಾವತಿಸಲು ಆರು ತಿಂಗಳು ಸಮಯ ಕೊಡುತ್ತೇವೆ. ಒನ್ ಟೈಮ್ ಸೆಟ್ಲ್‌ಮೆಂಟ್‌ನಲ್ಲಿ ಶೇ.6 ಬಡ್ಡಿ ದರದಲ್ಲಿ ಸಾಲ ಮರುಪಾವತಿಸಬಹುದು ಎಂಬುದಾಗಿ ತಿಳಿಸಿದ್ದಾರೆ ಎಂದರು.
ಭಾರತದಲ್ಲಿ ಉಪಗ್ರಹ ಮೂಲಕ ಮೊಬೈಲ್ ನೆಟ್ವರ್ಕ್ ನೀಡುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಪೀಡಿತ ಪ್ರದೇಶ ಆಗಿರುವುದರಿಂದ ಜಿಲ್ಲೆಯನ್ನು ಉಪಗ್ರಹ ಮೊಬೈಲ್ ನೆಟ್ವರ್ಕ್‌ಗೆ ಸೇರಿಸುವಂತೆ ಕೇಂದ್ರ ದೂರ ಸಂಪರ್ಕ ಸಚಿವರಿಗೆ ಕೋರಿಕೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಒಟ್ಟು 217 ಬಿಸ್‌ಎನ್‌ಎಲ್ ಟವರ್‌ಗಳ ಪೈಕಿ, 19ರಲ್ಲಿ ಮಾತ್ರ ಬ್ಯಾಟರಿ ಇತ್ತು. ಈಗ ನಾನು 98 ಟವರ್‌ಗೆ ಬ್ಯಾಟರಿ ಹಾಕಿಸಿದ್ದೇನೆ. 100 ಹೊಸ ಟವರ್ ಕೇಳಿದ್ದೇನೆ. ಸಂಸೆ-ದಿಡುಪೆ ರಸ್ತೆ ನಿರ್ಮಾಣಕ್ಕೆ ಅಂದಾಜು ನಕ್ಷೆ ಮಾಡಲಾಗಿದೆ. ಕೊಟ್ಟಿಗೆಹಾರದಿಂದ ಎಸ್‌ಕೆ ಬಾರ್ಡರ್ ಹೊರಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸುವ ಬಗ್ಗೆ ಜ.6ರಂದು ಮೂಡಿಗೆರೆಯಲ್ಲಿ ಇಂಜಿನಿಯರ್ ಜತೆ ಸಭೆ ನಡೆಸುತ್ತೇನೆ. ಕಳಸ ಭಾಗದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆ ಬಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ, ಕಳಸ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಹೇಶ್, ಜಿಲ್ಲಾ ಕಾರ್ಯದರ್ಶಿ ಸುಜಯಾ ಸದಾನಂದ, ಮುಖಂಡರಾದ ದೀಪಕ್ ದೊಡ್ಡಯ್ಯ, ಗಿರೀಶ್ ಹೆಮ್ಮಕ್ಕಿ, ಉಷಾ ವಿಶ್ವನಾಥ್, ಮೋಹನ್, ಸುಂದರ ಶೆಟ್ಟಿ ಇತರರಿದ್ದರು.