ಚಿಂತಾಮಣಿ : ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯ ವಕ್ಫ್ ಬೋರ್ಡ್ ಮೂಲಕ ರೈತರು, ದೇವಾಲಯಗಳು, ಮಠ, ಹಿಂದು ಸ್ಮಶಾನಗಳ ಜಮೀನನ್ನು ವಕ್ಫ್ ಆಸ್ತಿ ಎಂದು ದಾಖಲೆಗಳಲ್ಲಿ ನಮೂದು ಮಾಡಲು ಮುಂದಾಗಿದೆ ಎಂದು ಕೋಲಾರದ ಮಾಜಿ ಸಂಸದ ಎನ್.ಮುನಿಸ್ವಾಮಿ ದೂರಿದರು.
ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯಲ್ಲಿರುವ ಬಿಜೆಪಿಯ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಚಿವ ಜಮೀರ್ ಅಹಮದ್ ಅವರು ಟ್ರಾವೆಲ್ಸ್ ಇಟ್ಟುಕೊಂಡು ಬಸ್‌ಗಳಲ್ಲಿ ಪಾಕಿಸ್ತಾನಕ್ಕೆ ಹೋಗಿ ಬರುತ್ತಾ ಆ ದೇಶದ ಪರವಾಗಿದ್ದಾರೆ ಎಂದು ದೂರಿದರು.
ನಾವು ಭಜನೆ, ಮೆರವಣೆಗೆ ಮಾಡಬೇಕಾದರೆ ಹಲವು ಇಲಾಖೆಗಳ ಅಪ್ಪಣೆ ಪಡೆಯಬೇಕು, ಆದರೆ ಇನ್ನೊಂದು ಜನಾಂಗಕ್ಕೆ ಮಾತ್ರ ಯಾವ ಅಪ್ಪಣೆ ಬೇಕಾಗಿಲ್ಲ, ಈ ದೇಶದಲ್ಲಿ ಹುಟ್ಟಿ ನೆಲ,ಜಲ ಅನುಭವಿಸಿ ಎಲ್ಲ ಜಾತೀಯ ಮತದಾರರ ಮತ ಹಾಕಿಸಿಕೊಂಡು ಈಗ ಮತ್ತೊಂದು ಜನಾಂಗದ ಮತಗಳ ಓಲೈಕೆ ಮಾಡಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ದೇವನಹಳ್ಳಿ ಗೋಪಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಘೋಷಣೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಜಮೀರ್ ಅಹಮದ್ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು.