ಹಾಸನ: ಸಂವಿಧಾನ ಬದಲಾವಣೆ ಬಗ್ಗೆ ಪ್ರಶ್ನೆ ಮಾಡಿದ 18 ಮಂದಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಅಮಾನತು ಮಾಡಿರುವ ಕ್ರಮ ಖಂಡಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಪಂ ಕಚೇರಿ ಎದುರಿನ ಬಿಎಂ ರಸ್ತೆ ತಡೆದು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಕಚೇರಿ ಬಳಿಗೆ ಆಗಮಿಸಿ ಕೆಲ ಹೊತ್ತು ಧರಣಿ ನಡೆಸಿ ಕೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಕಲೇಶಪುರ ಶಾಸಕ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ನಿರಂತರವಾಗಿದೆ. ಎಸ್ಟಿ ನಿಗಮದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರ ಸಂಘದವರು ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇದರಿಂದಲೇ ನೊಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹೊಸ ಕಾಮಗಾರಿಗೆ ಭೂಮಿ ಪೂಜೆ ಮಾಡಿಲ್ಲ ಎಂದು ದೂರಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೂ ಡಿಸಿಎಂ ಅವರು ಸಂವಿಧಾನ ಬದಲಾದರೂ ಸರಿ, ಮುಸ್ಲಿಮರಿಗೆ ಮೀಸಲಾತಿ ಕೊಡುವೆ ಎಂದಿದ್ದಾರೆ, ಇದು ಸಂವಿಧಾನ ವಿರೋಧಿ ನಡೆ. ದೇಶದಲ್ಲಿ ಸಂವಿಧಾನಕ್ಕೆ ಹೆಚ್ಚು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್, ಮಾತೆತ್ತಿದರೆ ನಾವು ದಲಿತರ ಪರ ಎನ್ನುವ ಇವರು, 39 ಸಾವಿರ ಕೋಟಿ ರೂ. ಪರಿಶಿಷ್ಟರ ಅನುದಾನವನ್ನು ದುರ್ಬಳಕೆ ಮಾಡಿ ವಿವಿಧ ಭಾಗ್ಯಗಳಿಗೆ ಬಳಕೆ ಮಾಡಿ, ದೀನ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಇದೀಗ ದೊಡ್ಡ ಸದ್ದು ಮಾಡುತ್ತಿರುವ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವವರು ಕೂಡಲೇ ರಾಜೀನಾಮೆ ಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ 18 ಬಿಜೆಪಿ ಶಾಸಕರನ್ನು ವಜಾ ಮಾಡಿರುವ ಸ್ಪೀಕರ್ ತನ್ನ ನಿರ್ಣಯ ಹಿಂಪಡೆದು ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಎನ್.ವಿ.ಫಣೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ದೆಹಲಿ ನಾಯಕರಿಗೆ ಹಣ ಪೂರೈಸುವ ಎಟಿಎಂ ಆಗಿದೆ. ಪರ್ಸೆಂಟೇಜ್ ಶೇ.70 ರಷ್ಟು ತಲುಪಿದೆ. ಈ ಸರ್ಕಾರದ ಕರ್ಮಕಾಂಡಕ್ಕೆ ಒಂದು ಅಂತ್ಯ ಕಾಣಿಸುವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ಮುಖಂಡರಾದ ನವಿಲೆ ಅಣ್ಣಪ್ಪ, ಅಮಿತ್‌ಶೆಟ್ಟಿ, ಪ್ರಸನ್ನ ಕುಮಾರ್, ಗಿರೀಶ್, ಶ್ರೀಕಾಂತ್, ಚನ್ನಕೇಶವ, ಪ್ರತಾಪ್, ಶಿವಪ್ಪ, ನಾರಾಯಣಗೌಡ, ಚಂದ್ರು, ಹರ್ಷಿತ್, ಮಹಿಳಾ ಮುಖಂಡರಾದ ವೇದಾವತಿ, ಶೇಷಮ್ಮ, ರತ್ನಾ ಮೊದಲಾದವರು ಪಾಲ್ಗೊಂಡಿದ್ದರು.