ಹಾಸನ: ವಕ್ಫ್ ಮಂಡಳಿಯಿಂದ ಬಡ ರೈತರ ಭೂಮಿಗಳನ್ನು ಕಾಂಗ್ರೆಸ್ ಸರ್ಕಾರ ಕಬಳಿಸುತ್ತಿದೆ ಎಂದು ಆರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಬಿಜೆಪಿ ಘಟಕದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಆರ್.ಸಿ. ರಸ್ತೆ ಬಳಿ ಇರುವ ಬಿಜೆಪಿ ಜಿಲ್ಲಾ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಜಿಲ್ಲಾ ಪಂಚಾಯಿತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಪ್ರತಿಭಟಿಸಿದರು.
ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕರಾಳ ಕಾಯ್ದೆದಲ್ಲಿ ವಕ್ಫ್ ಕಾಯ್ದೆ ಕೂಡ ಒಂದಾಗಿದೆ. ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ನಾಡನ್ನು ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಇದು ಜಂಟಿ ಸದನ ಸಮಿತಿ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈ ಚಳಕ ತೋರುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.
ಅದರಲ್ಲೂ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಕುಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮಿರ್ ಅಹಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ರೈತರ 1,500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಿ ತಹಸೀಲ್ದಾರ್‌ರಿಂದ ಪುಷ್ಟೀಕರಿಸಿ ನೋಟೀಸ್ ನೀಡಲಾಗಿದೆ. ಬೆಂಗಳೂರಿನ ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್‌ಗೆ ಸೇರಿದೆ ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಹಾವೇರಿ ಜಿಲ್ಲೆಯಲ್ಲಿ 1649 ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲೂಕು ಕಡಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತ ದೇವಸ್ಥಾನದ ಅತಿಕ್ರಮಣಕ್ಕೆ ವಕ್ಫ್ ಬೋರ್ಡ್ ಮುಂದಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ವಕ್ಫ್ ಆಸ್ತಿ ಎಂದು ಹಕ್ಕು ಮಂಡಿಸಿದೆ. ಸರ್ಕಾರಿ ಅಧೀನದಲ್ಲಿರುವ ಆಸ್ತಿಗಳನ್ನೇ ತನ್ನದೆಂದು ವಕ್ಫ್ ಹೇಳುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇಗುಲಕ್ಕೆ ಸೇರಿದ 6 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ವಿಜಯಪುರ ಜಿಲ್ಲೆಯ 1500 ವರ್ಷ ಇತಿಹಾಸವಿರುವ ಸಿಂಧಗಿಯ ವಿರಕ್ತ ಮಠವೂ ವಕ್ಫ್ ಆಸ್ತಿ ಎಂದು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. 2000 ವರ್ಷ ಇತಿಹಾಸವಿರುವ ಸೋಮನಾಥೇಶ್ವರ ದೇವಾಲಯ, ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಪೂರ್ವಜರಿಂದ ಬಂದ ಜಮೀನುಗಳನ್ನು ಅನುಭವಿಸುತ್ತಿದ್ದ ರೈತರಿಗೂ ವಕ್ಫ್ ಆಸ್ತಿ ಎಂದು ತಹಸೀಲ್ದಾರ್‌ನಿಂದ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೋಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಇದು ಇಡೀ ರಾಜ್ಯವನ್ನು ವ್ಯಾಪಿಸುವ ಸಾಧ್ಯತೆಯಿದೆ. ಇಡೀ ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ಸಿದ್ದರಾಮಯ್ಯನವರ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ. ಇದೇ ತೆರನಾದ ನಿಲುವುಗಳನ್ನು ಮುಂದುವರೆಸಿದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರೆಯಲಿದೆ. ಈ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರ್ಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಿ, ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೆಶನ್ ಅನ್ನು ಹಿಂಪಡೆಯಬೇಕು ಹಾಗೂ ಕೇಂದ್ರ ಸರ್ಕಾರವು ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಪಕ್ಷದ ಮುಖಂಡರಾದ ಬಾಬು, ಎಸ್.ಡಿ. ಚಂದ್ರು, ಶೋಭನ್ ಬಾಬು, ಎನ್.ಆರ್. ಗಿರೀಶ್, ಪ್ರಸನ್ನಕುಮಾರ್, ಮಂಜು ಯೋಗೀಶ್, ಮಹಿಳಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಾಣಾವಾರ, ಜಯಣ್ಣ, ರಾಜಕುಮಾರ್, ಶ್ರೀಪತಿ ಅಯ್ಯಂಗರ್, ಗಂಗಾಧರ್, ಪುನೀತ್ ಇತರರು ಉಪಸ್ಥಿತರಿದ್ದರು.