ಜಿಲ್ಲೆ

ರಾಜ್ಯ ಸರ್ಕಾರದ ತಾಲಿಬಾನ್ ಆಡಳಿತ -ರೇಣುಕಾಚಾರ್ಯ ಟೀಕೆ

ದಾವಣಗೆರೆ: ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವ ರಾಜ್ಯ ಸರ್ಕಾರ ಹಿಂದು ವಿರೋಧಿಯಾಗಿದೆ, ತಾಲಿಬಾನ್ ಆಡಳಿತ ನಡೆಸುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಗಳ ಮತಗಳಿಂದ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತೆ ನಮ್ಮನ್ನು ಕೆಣಕಿದರೆ ಹಿಂದುಗಳು ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕರಸೇವಕ ಶ್ರೀಕಾಂತ್ ಪೂಜಾರಿ ಜಮೀನು ಪಡೆದು ಬಿಡುಗಡೆಯಾಗಿದ್ದಾರೆ. ರಾಮಭಕ್ತ ಕರಸೇವಕರನ್ನು ಅಪರಾಧಿಗಳು ಎಂಬುದಾಗಿ ಸಿಎಂ ಸಿದ್ದರಾಮಯ್ಯ, ಡಿಜೆ ಹಳ್ಳಿ ಗಲಾಟೆಯಲ್ಲಿನ ಅಪರಾಧಿಗಳನ್ನು ಅಮಾಯಕರು ಎಂಬುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಕರಸೇವಕರು ಮತ್ತು ಶ್ರೀರಾಮನ ಶಾಪದಿಂದ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

ಕರಸೇವಕ ಹಿಂದು ಕಾರ್ಯಕರ್ತರ ಬಂಧನ ಖಂಡಿಸಿ, ನಾನೂ ಕರಸೇವಕ ನನ್ನನ್ನು ಬಂಧಿಸಿ ಅಭಿಯಾನದಡಿ ಜ.8ರಂದು ಬೆಳಗ್ಗೆ 10.30ಕ್ಕೆ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸರ್ಕಾರಕ್ಕೆ ಅಲ್ಪಸಂಖ್ಯಾತರಿಗೆ ಕೊಡಲು ಹಣ ಇದೆ, ಹಿಂದು ದೇವಾಲಯಗಳಿಗೆ ಕೊಡಲು ಹಣ ಇಲ್ಲ ಎಂದು ಕಿಡಿಕಾರಿದ ರೇಣುಕಾಚಾರ್ಯ, ಬರಗಾಲ ಹಿನ್ನೆಲೆಯಲ್ಲಿ ಬೆಳೆನಷ್ಟಕ್ಕೆ ಒಳಗಾದ ರೈತರಿಗೆ 25 ಸಾವಿರ ಕೋಟಿ ರೂ.ಗಳ ಪರಿಹಾರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಗೋದ್ರಾ ಘಟನೆ ಮರುಕಳಿಸಲಿದೆ ಎಂದು ಹೇಳಿರುವ ಬಿ.ಕೆ. ಹರಿಪ್ರಸಾದ್, ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದೆ, ಸಿಎಂಗೆ ಮನವಿ ಸಲ್ಲಿಸಲಿ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಡಾ.ರವಿಕುಮಾರ್, ಎನ್. ರಾಜಶೇಖರ್, ಕೆ.ಎಂ. ಸುರೇಶ್, ಪಿ.ಸಿ. ಶ್ರೀನಿವಾಸ್ ಭಟ್ ಇದ್ದರು.

---