ಜಿಲ್ಲೆ

ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದ ಎಚ್.ಡಿ. ರೇವಣ್ಣ

ಹಾಸನ: ದೇಶದಲ್ಲಿ ಈಗ ಇರುವುದು ರಾಜೀವ್ ಗಾಂಧಿ, ನೆಹರು, ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ಅಲ್ಲ, ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯುವ ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಜಿಕ್ ಎನ್ನುವ ರೀತಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇದು ಹೆಚ್ಚು ದಿನ ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ನರೇಂದ್ರ ಮೋದಿ ಅವರು ತರ್ಪಣ ಬಿಡಲಿದ್ದಾರೆ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ಬೇಕಾದಾಗ ತಬ್ಬಿಕೊಳ್ಳುತ್ತಾರೆ, ಬೇಡವಾದಾಗ ದೂರ ತಳ್ಳುತ್ತಾರೆ. ದೇವೇಗೌಡರು ಬರುವವರೆಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಆಗಿರಲಿಲ್ಲ. ದೇಶ, ರಾಜ್ಯದಲ್ಲಿ ಇರೋದು ನಕಲಿ ಕಾಂಗ್ರೆಸ್. ಇದು ಹೆಚ್ಚು ದಿನ ಉಳಿಯುವುದಿಲ್ಲ, ಸಂಹಾರ ಮಾಡಲು ತಾಯಿ ಚಾಮುಂಡೇಶ್ವರಿ ಕಾಯುತ್ತಿದ್ದಾಳೆ. 2028ಕ್ಕೆ ಜೆಡಿಎಸ್ ಏನೆಂದು ತೋರಿಸುತ್ತೇವೆ ಎಂದು ಹೇಳಿದರು.
ನನ್ನನ್ನು ಮುಖ್ಯಮಂತ್ರಿ ಮಾಡಲು ಕುಮಾರಸ್ವಾಮಿ ಒಪ್ಪಲಿಲ್ಲ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಂಬೈಗೆ ತೆರಳಿದ್ದ 17 ಶಾಸಕರ ಪೈಕಿ 5 ಜನರನ್ನು ವಾಪಸ್ ಕರೆ ತರುತ್ತೇವೆ. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ, ನನ್ನನ್ನು ಉಪ ಮುಖ್ಯಮಂತ್ರಿಯಾಗಿ ಮಾಡಲು ಚರ್ಚೆ ನಡೆದಿತ್ತು. ತಾಜ್ ಹೋಟೆಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಮಾತುಕತೆ ನಡೆದ ವೇಳೆ, ಕುಮಾರಸ್ವಾಮಿ ಅವರು ನಾನು ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಲು ತಯಾರಿದ್ದೇನೆ ಎಂದು ಹೇಳಿದ್ದರು. ಆಗ ಕಾಂಗ್ರೆಸ್ ನಾಯಕರೊಬ್ಬರು ದೆಹಲಿಯಿಂದ ಕರೆ ಮಾಡಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ, ರೇವಣ್ಣ ಉಪಮುಖ್ಯಮಂತ್ರಿಯಾಗಲಿ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ. ಇದನ್ನು ಯಾವ ದೇವರ ಮುಂದೆ ಬೇಕಿದ್ದರೂ ಹೇಳುತ್ತೇನೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನದ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ. ನನಗೆ ಇಂಧನ ಖಾತೆ ಕೊಡಬೇಕು ಎಂದು ಸಿದ್ದರಾಮಯ್ಯ ಅವರೇ ಹೇಳಿದರೂ ಅದನ್ನು ತಪ್ಪಿಸಿದ್ದು ಯಾರು? ನಾನು ಗಿಡ ನೆಟ್ಟು 30 ವರ್ಷ ಬೆಳೆಸಿದ್ದೇನೆ. ಹಣ್ಣು ಕುಯ್ಯಬಾರದ ಎಂದು ಡಿಕೆಶಿ ಹೇಳುತ್ತಾರೆ. ಹಣ್ಣು ಕುಯ್ಯುವುದಾದರೆ ಯಾಕೆ ಶಾಸಕರನ್ನು ಕಳುಹಿಸಿದರು? ಆಗಲೇ ಹಣ್ಣು ಕುಯ್ಯಬಹುದಿತ್ತಿಲ್ಲ ಎಂದು ಟಾಂಗ್ ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು 14 ತಿಂಗಳು ನಾಮ್ ಕೇ ವಾಸ್ತೆ ಎಂಬಂತೆ ಮುಖ್ಯಮಂತ್ರಿಯಾಗಿದ್ದರು. ಡಿ.ಕೆ.ಶಿವಕುಮಾರ್ ಹೇಳಿದ್ದಕ್ಕೆ ಕುಮಾರಸ್ವಾಮಿ ಸಹಿ ಹಾಕಬೇಕಿತ್ತು. ಸುತ್ತೂರು ಮಠದಲ್ಲಿರುವ ಸಂಸ್ಕೃತ ಪಂಡಿತರಾದ ಮಲ್ಲಣ್ಣಾಚಾರ್ ಎಂಬುವವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ನನ್ನ ಕೈಯಲ್ಲಿ ಆಗಲಿಲ್ಲ. ನಾನು 11 ಗಂಟೆಯವರೆಗೆ ಸಭೆ ನಡೆಸಿ, ಪ್ರಶಸ್ತಿ ಕೊಡಿ ಸ್ವಾಮಿ ಎಂದರೂ ಕೊಡಲಿಲ್ಲ. ಮುಖ್ಯಮಂತ್ರಿಗಳ ಕಚೇರಿಯನ್ನು ನಿರ್ವಹಣೆ ಮಾಡುತ್ತಿದ್ದವರೇ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದ ಅವರು, ಸುಳ್ಳು ಹೇಳಲು ಒಂದು ಮಿತಿ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಅವರು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗ ಬಿಜೆಪಿ ನಾಯಕರು ಬೆಂಬಲ ನೀಡುವುದಾಗಿ ಹೇಳಿದರು. ಆದರೆ, ಜ್ಯಾತ್ಯತೀತ ನಿಲುವಿಗೆ ಬದ್ಧರಾಗಿ ಪ್ರಧಾನ ಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಕುಮಾರಸ್ವಾಮಿ, ದೇವೇಗೌಡರು ಇರುವವರೆಗೆ ಜೆಡಿಎಸ್ ಮುಗಿಸಲು ಆಗುವುದಿಲ್ಲ. ಕಾಂಗ್ರೆಸ್ 136 ಸ್ಥಾನ ಇದ್ದರೂ ಸುರಕ್ಷತೆ ಹುಡುಕುತ್ತಿದ್ದಾರೆ. ನಮ್ಮಿಂದ ಹೋಗೋರು ಹೋಗಲಿ ನಾಲ್ಕು ವರ್ಷ ಮಜಾ ಮಾಡಿ ಮತ್ತೆ ನಮ್ಮ ಬಳಿಗೆ ಬರುತ್ತಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ರೇವಣ್ಣ:
ಸಿಎಂ ಪುತ್ರ ಯತೀಂದ್ರರ ವೀಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ರೇವಣ್ಣ, ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾ ಹೇಳುತ್ತಾರೆ ಅದು ತಪ್ಪ! ಅವರೂ ಶಾಸಕರಾಗಿದ್ದಾಗ ಕೆಲಸ ಆಗಬೇಕು ಅಂತಾ ಹೇಳಿರಬಹುದು. ಸಿಎಂ ಕ್ಷೇತ್ರದ ಜವಾಬ್ದಾರಿ ತಗೊಂಡಿದ್ದಾರೆ. ಹಾಗಾಗಿ ಏನೋ ಮಾತಾಡಿರಬಹುದು. ಅದಕ್ಕೆಲ್ಲಾ ನಾನು ಸಣ್ಣದಾಗಿ ಮಾತಾಡೋಕೆ ಹೋಗಲ್ಲ. ನಾನೂ ಕೂಡ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರ ನಾನು ನೋಡಿಕೊಳ್ಳುತ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರ್ತಾರೆ. ಅದಕ್ಕೆಲ್ಲಾ ನಾನು ಸಣ್ಣದಾಗಿ ಮಾತಾಡಲ್ಲ ಎಂದರು.

ರೈತರಿಗೆ ಭೂ ಪರಿಹಾರ ನೀಡಿ:
ಕಾಲುವೆಗಳ ನಿರ್ಮಾಣದ ವೇಳೆ ಭೂ ಸ್ವಾಧೀನ ಮಾಡಿಕೊಂಡ ರೈತರಿಗೆ ಇದುವರೆಗೂ ಪರಿಹಾರ ಹಣ ನೀಡಲು ಸಾಧ್ಯವಾಗದೇ ಸರಕಾರಿ ಕಚೇರಿಗಳು ಜಪ್ತಿ ಆಗುತ್ತಿದೆ. ಹೊಳೆನರಸೀಪುರ ನೀರಾವರಿ ಇಲಾಖೆ ಕಚೇರಿ ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಹಾಸನ ಭೂ ಸ್ವಾಧೀನ ಕಚೇರಿಯ ಪಿಠೋಪಕರಣಗಳನ್ನೂ ಕೂಡ ಜಪ್ತಿ ಮಾಡಲು ಆದೇಶ ಮಾಡಿದೆ ಎಂದು ರೇವಣ್ಣ ವ್ಯಂಗ್ಯವಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದಾಗ ಜಿಲ್ಲೆಯ ಬರಗಾಲ ನಿರ್ವಹಣೆಗೆ 12 ಕೋಟಿ ಹಣ ನೀಡಿದ್ದೇವೆ ಎಂದು ಹೇಳಿದ್ದರು. 12 ಕೋಟಿ ಹಣದಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ ಹಣ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದ್ದರು. ಉಳಿದ 8 ಕೋಟಿ ಹಣ ಜಿಲ್ಲಾಧಿಕಾರಿಯವರ ಯಾವ ಬ್ಯಾಂಕ್ ಖಾತೆಯಲ್ಲಿ ಇದೆ ಎಂಬ ಮಾಹಿತಿ ಇಲ್ಲ ಎಂದರು.
1983 ರಲ್ಲಿ ಕಟ್ಟಿದ ನಾಲೆಗಳು, ಹೂಳು, ಕಸ ಕಡಿಗಳಿಂದ ತುಂಬಿವೆ. ನಾಲೆಗಳ ನೀರು ಜನರ ಜಮೀನಿಗೆ ತಲುಪುತ್ತಿಲ್ಲ. ಇವುಗಳನ್ನು ಸ್ವಚ್ಛ ಮಾಡಲು ಅರಣ್ಯ ಇಲಾಖೆ ಅನುಮತಿ ಬೇಕು. ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಯಗಚಿ ನದಿಯಿಂದ ಒಂದು ಹನಿ ನೀರೂ ಬಂದಿಲ್ಲ. ನೀರಾವರಿ ಕಾಲುವೆಗಳಲ್ಲಿ ಕಾಡು ಬೆಳೆದಿವೆ. ಕಳೆದ 5 ವರ್ಷಗಳಿಂದ ಅವುಗಳನ್ನು ನಿರ್ವಹಣೆ ಮಾಡಿಲ್ಲ ಎಂದು ನೀರಾವರಿ ಇಲಾಖೆ ಮೇಲೆ ಆರೋಪಿಸಿದರು.