ಜಿಲ್ಲೆ

ರಾಜ್ಯ ಸರ್ಕಾರ ಪ್ರತಿವರ್ಷ ಮಹಿಷ ದಸರಾ ಆಚರಿಸಲಿ

ಮೈಸೂರು: ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಮಹಿಷ ದಸರಾ ಆಚರಣೆ ಮಾಡಬೇಕು ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

ನಗರದ ಪುರಭವನದ ಆವರಣದಲ್ಲಿ ಆಯೋಜಿಸಿದ್ದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷಾ ದಸರಾ’ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವು ದಸರಾ ಆಚರಣೆಗೆ ಕೋಟ್ಯಂತರ ರೂ. ವ್ಯಯ ಮಾಡುತ್ತದೆ. ಯಾವ್ಯಾವುದೋ ಸಂಭ್ರಮ ಮಾಡುತ್ತಿದೆ. ಈ ನೆಲದ ಮೂಲ ನಿವಾಸಿ ಮಹಿಷನನ್ನು ಏಕೆ ಸ್ಮರಿಸುವುದಿಲ್ಲ. ಮಹಿಷನ ಹೆಸರಿನಲ್ಲಿ ವಿಚಾರಸಂಕಿರಣ ಏಕೆ ಮಾಡಲ್ಲ? ಎಂದು ಪ್ರಶ್ನಿಸಿದರು.

ನಾಡಹಬ್ಬ ದಸರಾಕ್ಕೆ ಖರ್ಚು ಮಾಡುವುದು ತೆರಿಗೆ ಹಣವಾದ್ದರಿಂದ ಈ ಸಂದರ್ಭದಲ್ಲಿ ಮಹಿಷನನ್ನು ಸ್ಮರಿಸಬೇಕು. ಸರ್ಕಾರದ ವತಿಯಿಂದಲೇ ಮಹಿಷ ದಸರಾ ಆಚರಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಬಿಡುಗಡೆಯಾಗಿರುವ ಲೇಖಕ ಕೃಷ್ಣಮೂರ್ತಿ ಅವರು ಮಹಿಷ ಮರ್ದಿನಿ ಕೃತಿಯಲ್ಲಿ ಬರೀ ಸುಳ್ಳಿನ ಕಂತೆ ಇದೆ. ಇದರಲ್ಲಿ ‘ಗೆಜೆಟಿಯರ್, ಬ್ರಿಟಿಷರು ಸೇರಿದಂತೆ ತಜ್ಞರು, ಲೇಖಕರು ಬರೆದಿರುವುದು ಸುಳ್ಳು. ಎಮ್ಮೆಯಿಂದ ಮೈಸೂರಿಗೆ ಹೆಸರು ಬಂದಿದೆ’ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ಎಮ್ಮೆ ಸಾಕುತ್ತಿದ್ದವರು ಯಾರು? ಕೋಣ ಯಾರ ಸಂಕೇತ? ಎಂದು ಪ್ರಶ್ನಿಸಿದರು.

ಮೈಸೂರು ಮಹಾರಾಜರನ್ನು ಮಹಿಷಾ ಮಂಡಲಾಧೀಶ ಬಹುಪರಾಕ್ ಎನ್ನಲಾಗುತ್ತದೆ. ಮಹಾರಾಜರು ಬರೆದ ಪತ್ರಗಳಲ್ಲಿ ಮಹಿಷಾಪುರವಾಸಿ ಎಂದು ನಮೂದಿಸಿದ್ದಾರೆ. ಮಹಾರಾಣಿಯನ್ನು ಪಟ್ಟದ ಮಹಿಷಿ ಎನ್ನುತ್ತಿದ್ದರು. ಇವುಗಳೆಲ್ಲ ಸುಳ್ಳೇ? ಯಾವುದನ್ನೂ ಸೃಷ್ಟಿ ಮಾಡಬೇಕಾದರೂ ದಾಖಲೆ ಇರಬೇಕು. ಚರಿತ್ರೆಯನ್ನು ದಮನ ಮಾಡಲಿಕ್ಕೆ ಸಾಧ್ಯ ಇಲ್ಲ ಎಂದು ಗುಡುಗಿದರು.

ಮಹಿಷ ಮರ್ದಿನಿ ಕೃತಿಯ ವಿರೋಧ ಮಾಡುತ್ತಿಲ್ಲ. ಆ ಕೃತಿಯ ಬಗ್ಗೆ ಚರ್ಚೆ ಮಾಡಲು ಸಿದ್ಧ. ಲೇಖಕರು ಬರುತ್ತಾರೆಯೇ? ಎಂದು ಸವಾಲು ಹಾಕಿದರು.

‘ಭಾರತ ಇತಿಹಾಸ, ಪುರಾಣಗಳು ಮಹಿಳೆಯರು, ಮಕ್ಕಳ ರಂಜಿಸುವ ಕಥೆಗಳು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಕಟುವಾಗಿ ಟೀಕಿಸಿದ್ದರು. ಅಂತೆಯೇ 12ನೇ ಶತಮಾನದಲ್ಲೇ ಬಸವಾದಿ ಶರಣರು ಸಹ ಪುರಾಣ, ವೇದ, ಆಗಮನಶಾಸ್ತ್ರವನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದರು. ಜತೆಗೆ, ವಿಮರ್ಶೆಗೆ ಒಳಪಡಿಸಿದ್ದರು. ಆದರೀಗ ಇವುಗಳ ಮೂಲಕ ಮತ್ತೆ ಮೋಸಗೊಳಿಸುವ, ವಂಚನೆ ಮಾಡುವ ಕೆಲಸಗಳು ಮುಂದುವರಿದಿದೆ ಎಂದು ದೂರಿದರು.

ನಿವೃತ್ತ ಡಿಸಿಪಿ, ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ವಿಭಾಗದ ಅಧ್ಯಕ್ಷ ಎಸ್.ಸಿದ್ದರಾಜು ಮಾತನಾಡಿ, ಕಾಟಾಚಾರಕ್ಕೆ ಬುದ್ಧ, ಅಂಬೇಡ್ಕರ್ ಎಂದು ಹೇಳಬೇಡಿ. ಹೃದಯಪೂರ್ಣವಾಗಿ ಅವರನ್ನು ಒಪ್ಪಿಕೊಳ್ಳಬೇಕು. ಅವರ ವಿಚಾರವನ್ನು ಆಚರಣೆಗೆ ತರಬೇಕು. ಪ್ರತಿಯೊಬ್ಬರ ಮನೆಯಲ್ಲಿ ಬುದ್ಧ, ಅಶೋಕ, ಅಂಬೇಡ್ಕರ್ ಭಾವಚಿತ್ರ ಇಡಬೇಕು ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ದಲಿತರು ಧರ್ಮ ಕಾಲಂನಲ್ಲಿ ಬುದ್ಧ ಧರ್ಮ ಎಂದು ಬರೆಸಬೇಕು. ಜಾತಿ ಕಾಲಂ ನಿಮ್ಮ ಜಾತಿಯನ್ನು ಬರೆಸಬೇಕು. ಇದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗಲ್ಲ ಎಂದರು.

ಶಾಂತಿ ಸಂಕೇತವಾದ ಆನೆಯ ಮೇಲೆ ಸಂವಿಧಾನ ಇಟ್ಟು ದಸರಾ ಮೆರವಣಿಗೆ ಮಾಡಬೇಕು ಎಂದು ಆಗ್ರಹಿಸಿದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಸರ್ವ ಸಮಾನತೆ ಮನುಷ್ಯತ್ವ ಎತ್ತಿ ಹಿಡಿಯುವುದೇ ಧರ್ಮ. ಬುದ್ಧ ಕೊಟ್ಟ ಚಿಂತನೆ ಜಗತ್ತಿಗೆ ಬೇಕಾಗಿದೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ತ್ವರಿತವಾಗಿ ಇದು ಪಸರಿಸುತ್ತಿದೆ. ಸ್ವತಂತ್ರವಾದ ಆಲೋಚನೆ ಇದ್ದವರು ಬುದ್ಧರನ್ನು ಒಪ್ಪಿದ್ದಾರೆ. ಶೂದ್ರರು ಸ್ವಾಭಿಮಾನಿಗಳಾಗಬೇಕು ಎಂದು ತಿಳಿಸಿದರು.

ಲೇಖಕ ಸಿದ್ದಸ್ವಾಮಿ ಮಾತನಾಡಿ, ಮಹಿಷಾಸುರ ಮೈಸೂರು ಅಸ್ಮಿತೆ. ಮೌಢ್ಯತೆಯ ವಿರೋಧಿ. ಯಾರೊಂದಿಗೂ ವೈರತ್ವ ತಾಳಲು ಮಹಿಷಾ ದಸರಾ ಆಚರಿಸುತ್ತಿಲ್ಲ. ನಮ್ಮ ಅಸ್ತಿತ್ವ ಕಂಡುಕೊಳ್ಳಲು ಆಚರಿಸಲಾಗುತ್ತಿದೆ ಎಂದರು.

ಲೇಖಕ ದೀಲಿಪ್ ನರಸಯ್ಯ ಮಾತನಾಡಿ, ಸಂಸ್ಕೃತದಲ್ಲಿ ಮಹಿಷ ಎಂದರೆ ಶ್ರೇಷ್ಠ, ಬಲಿಷ್ಠ ಎಂದರ್ಥವಿರುವಾಗ ರಾಕ್ಷಸ ಹೇಗಾದರು? ಯಾವ ರೀತಿ ನರ ಭಕ್ಷಕನಾದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದರು.

ಪೆರಿಯಾರ್ ಚಳವಳಿ ಹೋರಾಟಗಾರ ಕೊಳತ್ತೂರು ಟಿ.ಎಸ್.ಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಹೋರಾಟಗಾರ ಹರಿಹರ ಆನಂದಸ್ವಾಮಿ ಇನ್ನಿತರರಿದ್ದರು.

ಚಾಮುಂಡಿ ಬೆಟ್ಟದಲ್ಲಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಪೊಲೀಸರು ಅವಕಾಶ ನೀಡಲಿಲ್ಲ. ನಿಷೇಧಾಜ್ಞೆ ಹೊರಡಿಸುವ ಮೂಲಕ ಇದನ್ನು ತಡೆಯಲಾಯಿತು. ಹೀಗಾಗಿ, ಸಭಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಯಿತು.