ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದರು.
ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸೆ. 27 ರಂದು ಜಿಲ್ಲೆಯ ಎರಡು ವಿಧಾನ ಸಭೆ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಾಗಠಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿವಗಿರಿ ಬಳಿ ಜಾಲಹಳ್ಳಿ ಮಠ, ಮತ್ತು ಬಸವನಬಾಗೇವಾಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ಪಟ್ಟಣದ ತಾಳಿಕೋಟೆ ರಸ್ತೆಯ ಪಂಚಾಕ್ಷರಿ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನವೇ ನಳೀನಕುಮಾರ ಕಟೀಲ ಅವರು ವಿಜಯಪುರದ
ಸಿದ್ದೇಶ್ವರ ಶ್ರೀಗಳ ದರ್ಶನ ಪಡೆಯಲಿದ್ದಾರೆ. ಬಳಿಕ 12 ನೇ ವಾರ್ಡ್ ನಲ್ಲಿ ದಲಿತ ಸಮುದಾಯ ಕಾರ್ಯಕರ್ತನ ಮನೆಯಲ್ಲಿ ಭೋಜನೆ ಸವಿಯುವರು. ಬಳಿಕ ಎಸ್ ಟಿ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿ ನಗರದ ಬಿಜೆಪಿಯ ವಿವಿಧ ಅಂಗ ಘಟಕಗಳ ಪದಾಧಿಕಾರಿಗಳ ಸಭೆ ನಡೆಸುವರು ಎಂದು ತಿಳಿಸಿದರು.
ಭೂತ ಸಮಿತಿ, ಪಂಚರತ್ನ ಸಮಿತಿ ಜೊತೆ ಸಮಾಲೋಚನೆ ನಡೆಸಿ ಬಳಿಕ ಚಿಕ್ಕೋಡಿಗೆ ಪ್ರಯಾಣ ಬೆಳೆಸುವರು ಎಂದು ಕೂಚಬಾಳ ತಿಳಿಸಿದರು. ಸೆ. 17 ರಂದು ಪ್ರಧಾನಿ ಜನ್ಮ ದಿನದ ಕಾರ್ಯಕ್ರಮದಿಂದ ಹಿಡಿದು ಅ.2 ರ ಗಾಂಧಿ ಜಯಂತಿ ಆಚರಣೆವರೆಗೆ ಸೇವಾ ಪಾಕ್ಷಿಕ ಸಪ್ತಾಹ ಆಚರಿಸಲಾಗಿತ್ತಿದೆ. ಈಗಾಗಲೇ ರಕ್ತ ದಾನ ಶಿಬಿರ ನಡೆಸಲಾಗಿ 600 ಕ್ಕೂ ಅಧಿಕ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ. ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅಲ್ಲದೇ ಪಂ.ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಂದಿನ ಭಾಗವಾಗಿ ಅಮೃತ ಸರೋವರ ಕಾರ್ಯಕ್ರಮ ಆಯೋಜಿಸಲಾಗುವುದು. ಸೆ. 27 ರ ನಂತರ ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಏರ್ಪಡಿಸಲಾಗಿದೆ. ಅ.2 ರಂದು ಗಾಂಧಿ ಜಯಂತಿ ಹಿನ್ನೆಲೆ ಸ್ವದೇಶ ವಸ್ತುಗಳ ಬಳಕೆ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಭಿಮಾ ಫಸಲ್ ಯೋಜನೆ:
ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಿಮಾ ಫಸಲ ಯೋಜನೆಯಡಿ ಕನಿಷ್ಠ 3 ರಿಂದ ಗರಿಷ್ಠ 27 ಲಕ್ಷ ರೂ.ವರೆಗೆ ಹಣ ಜಮೆ ಆಗಿದೆ. ಜಿಲ್ಲೆಯ ರೈತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಕೂಚಬಾಳ ತಿಳಿಸಿದರು.
ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರು, ಸುರೇಶ ಬಿರಾದಾರ, ಎ.ಎಸ್. ಪಾಟೀಲ, ಅನೀಲ ಬಿರಾದಾರ, ವಿಜಯ ಜೋಷಿ ಮತ್ತಿತರರಿದ್ದರು.