ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ರಾಜ್ಯ ರೈತ ಸಂಘ ಮತ್ತು ಅಖಿಲ ಭಾರತ ರೈತ ಸಂಘರ್ಷ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು ಕೂಡಲೇ ತಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕರೊನಾ ವೈರಸ್‌ನಿಂದಾಗಿ ದೇಶದ್ಯಾಂತ ಸಂಕಷ್ಟ ಎದುರಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್ ಸೇರಿದಂತೆ ಹಲವು ನಿರ್ಧಾರ ತೆಗೆದುಕೊಂಡಿದೆ. ಆದರೆ, ಇದರಿಂದಾಗಿ ರೈತರು, ಕೃಷಿ ಕಾರ್ಮಿಕರು ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿದ್ದಾರೆ. ಇದರ ಪರಿಣಾಮ ಆತ್ಮಹತ್ಯೆ ಹೆಚ್ಚಾಗಬಹುದೆಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ರೈತ, ಕೃಷಿ ಕಾರ್ಮಿಕ ವರ್ಗದ ನೆರವಿಗೆ ಸರ್ಕಾರ ಧಾವಿಸಬೇಕೆಂದು ಆಗ್ರಹಿಸಿದರು.
ಮೈಶುಗರ್ ಕಾರ್ಖಾನೆ ಖಾಸಗೀಕರಣ ಹಿಂಪಡೆದಿರುವುದು ಸ್ವಾಗತಾರ್ಹ. ಅಂತೆಯೆ, ತಕ್ಷಣ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಿ ಮೈಶುಗರ್ ಮತ್ತು ಪಿಎಸ್‌ಎಸ್ ಕಾರ್ಖಾನೆ ಪ್ರಾರಂಭಿಸಬೇಕು. ಕೃಷಿ ಕಾರ್ಮಿಕರು, ಸ್ತ್ರೀ ಶಕ್ತಿ ಸಂಘದ ಸಾಲ ಸಂಪೂರ್ಣ ಮನ್ನಾ ಮಾಡುವುದರ ಜತೆಗೆ ಹೊಸ ಸಾಲ ನೀಡಬೇಕು. ಸ್ವಾಮಿನಾಥನ್ ವರದಿಯನ್ನು ತಕ್ಷಣವೇ ಜಾರಿಗೊಳಿಸಬೇಕು. ಕೃಷಿ ಸಮ್ಮಾನ್ ಯೋಜನೆಯ ಮೊತ್ತವನ್ನು ವಾರ್ಷಿಕ 25 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ನರೇಗಾದಲ್ಲಿ ರೈತರ ಎಲ್ಲ ಬೆಳೆಗಳನ್ನು ಅಳವಡಿಸುವುದರ ಜತೆಗೆ ವರ್ಷಪೂರ್ತಿ ಕೆಲಸ ನೀಡಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಲೀಟರ್ ಡೀಸೆಲ್ ಬೆಲೆಯನ್ನು 22 ರೂ.ಗೆ ಇಳಿಸಬೇಕು. ವಲಸೆ ಕಾರ್ಮಿಕರನ್ನು ಉಚಿತ ಪ್ರಯಾಣದ ವ್ಯವಸ್ಥೆಯೊಂದಿಗೆ ಅವರ ಸ್ವಂತ ಗ್ರಾಮಗಳಿಗೆ ತೆರಳಲು ಅವಕಾಶ ಕಲ್ಪಿಸಿಕೊಡಬೇಕು. ರೈತ ವಿರೋಧಿ ಎಂಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯಬೇಕು. ಗ್ರಾಮೀಣ ಮತ್ತು ನಗರವಾಸಿಗಳ ಬಡಜನರಿಗೆ ಬಿಪಿಎಲ್/ಎಪಿಎಲ್ ವಿಂಗಡಿಸದೆ ಪ್ರತಿ ಕುಟುಂಬದ ವ್ಯಕ್ತಿಗೆ ತಲಾ 15 ಕೆ.ಜಿ.ಅಕ್ಕಿ ನೀಡಬೇಕು. ಕೇರಳ ಮಾದರಿಯಂತೆ ಅಕ್ಕಿ ಜತೆಗೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಅವಶ್ಯ 16 ಸಾಮಗ್ರಿ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಕೋಶಾಧ್ಯಕ್ಷೆ ಜಿ.ಎಸ್.ಲಿಂಗಪ್ಪಾಜಿ ಇತರರಿದ್ದರು.