ಜಿಲ್ಲೆ

ರಾಜ್ಯ-ರಾಷ್ಟ್ರಕ್ಕೊಂದು ಸಾಂಸ್ಕೃತಿಕ ನೀತಿ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದು ಸಾಂಸ್ಕೃತಿಕ ಹಿನ್ನೆಲೆಯಿಂದ. ಭಾಷೆ, ಆಚಾರ-ಸಂಸ್ಕಾರ ನಂಬಿಕೆ, ಉಡುಗೆ ತೊಡುಗೆ, ಮತ, ಧರ್ಮಗಳು ಬೇರೆಯಾದರೂ ಸಹಬಾಳ್ವೆ, ಸಹಕಾರ, ಮಾನವೀಯ ಮೌಲ್ಯಗಳಿಂದ ದೇಶ ಒಂದಾಗಿ ಬಾಳಲು ಸಾಂಸ್ಕೃತಿಯೇ ಕಾರಣ ಎಂಬುದನ್ನು ಸ್ವಾತಂತ್ರೃ ಹೋರಾಟ ತೋರಿಸಿದೆ ಎಂದು ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅಭಿನಯ ಭಾರತಿ ದತ್ತಿ ಹಾಗೂ ದಿ. ಮೋಹನ ನಾಗಮ್ಮನವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ಸಂಸ್ಕೃತಿ- ಸಂಸ್ಕಾರ ಆಚಾರಗಳು ಮನೆಯಿಂದಲೇ ಪ್ರಾರಂಭವಾಗಿ ಶಾಲೆ- ಕಾಲೇಜುಗಳಲ್ಲಿ ಬೆಳೆದು ಬದುಕಿನಲ್ಲಿ ಆಚರಣೆಗೆ ಬಂದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ದಿ. ಮೋಹನ ನಾಗಮ್ಮನವರ ವ್ಯಕ್ತಿತ್ವ, ಹೋರಾಟ, ಸಾಹಿತ್ಯ, ಸಂಘಟನೆ ಕುರಿತು ವಿವರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಪ್ರೊ. ಸುರೇಶ ಗುದಗನ್ನವರ, ಪ್ರಮೀಳಾ ಜಕ್ಕನ್ನವರ, ಎಸ್.ದಾನಪ್ಪ ಗೌಡರ, ಶಿವಯೋಗಿ ಟೆಂಗಿನಕಾಯಿ, ಡಾ.ವಿ.ಬಿ. ಅಣ್ಣೀಗೇರಿ, ಚಂದ್ರಶೇಖರ ಪಾಟೀಲ, ಸಿ.ಎಂ. ಕೆಂಗಾರ, ಡಾ. ಗುರುನಾಥ ಬಡಿಗೇರ, ಸುನಂದಾ ನಿಂಬನಗೌಡರ, ಸಿದ್ದರಾಮ ಹಿಪ್ಪರಗಿ, ಡಾ. ರತ್ನಾ ಐರಸಂಗ, ಇತರರು ಇದ್ದರು.
ಪ್ರೊ. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಎಫ್.ಬಿ. ಕಣವಿ ವಂದಿಸಿದರು.