ಜಿಲ್ಲೆ

ರಾಜ್ಯ ಮುಕ್ತ ವಿವಿಗೆ ನ್ಯಾಕ್ ಎ+ ಗ್ರೇಡ್ ಮಾನ್ಯತೆ:ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ

ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ನ್ಯಾಕ್ ಎ+ ಗ್ರೇಡ್ ಮಾನ್ಯತೆ ಪಡೆದಿದ್ದು, ಈ ನಿಟ್ಟಿನಲ್ಲಿ ವಿವಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ತಿಳಿಸಿದರು.
ಉನ್ನತ ಶಿಕ್ಷಣ ಎಲ್ಲರಿಗೂಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ 1996ರಲ್ಲಿ ಸ್ಥಾಪನೆಯಾದ ವಿವಿ ಕಳೆದ 18 ವರ್ಷದಿಂದ ಎಲ್ಲ ವಯೋಮಾನದ ಲಕ್ಷಾಂತರ ಮಂದಿಗೆ ವಿದ್ಯೆ ನೀಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ದೂರ ಶಿಕ್ಷಣ ನೀಡುವ 16 ವಿವಿಗಳಲ್ಲಿ ನಮ್ಮ ವಿವಿ ಕೂಡ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಪ್ರಸ್ತುತ ವಿಶ್ವವಿದ್ಯಾನಿಲಯವು ಕರ್ನಾಟಕದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ 35 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಹಾಗೂ ಸಾಂಪ್ರದಾಯಕ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕಾರಣಕ್ಕಾಗಿ ನಮ್ಮ ವಿವಿಗೆ ನ್ಯಾಕ್ ಎ+ ಗ್ರೇಡ್ ಮಾನ್ಯತೆ ಪಡೆದಿದ್ದು, ಇದೇ ತಿಂಗಳ 17ರಂದು ಯುಜಿಸಿ ತಂಡ ವಿವಿಗೆ ಆಗಮಿಸಿ ವಿವಿಯ ಶಿಕ್ಷಣ ಕ್ರಮ, ಗುಣಮಟ್ಟ, ಮೂಲಸೌಲಭ್ಯ, ಕ್ಯಾಂಪಸ್, ಗ್ರಂಥಾಲಯ ಇವುಗಳೆಲ್ಲವನ್ನು ಪರಿಶೀಲನೆ ನಡೆಸಲಿದೆ. ಕರಾಮುವಿವಿ ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಹಸಿರು ಪರಿಸರದಲ್ಲಿ ಸುಸಜ್ಜಿತ ಆಡಳಿತ ಭವನ, ಪರೀಕ್ಷಾ ಭವನ, ವಿಜ್ಞಾನ ಭವನ, ಗ್ರಂಥಾಲಯ, ಪ್ರಾಯೋಗಿಕ ಪ್ರಯೋಗಾಲಯವನ್ನು ಹೊಂದಿದೆ. ರಾಜ್ಯಾದ್ಯಂತ 35 ಪ್ರಾದೇಶಿಕ ಕೇಂದ್ರಗಳು ಮತ್ತು 180 ಕಲಿಕಾರ್ಥಿ ಸಹಾಯ ಕೇಂದ್ರಗಳಿದ್ದು, ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಸೇವೆಯನ್ನು ಒದಗಿಸುತ್ತ ಬಂದಿದೆ ಎಂದು ತಿಳಿಸಿದರು.
ಕರಾಮುವಿವಿಯಲ್ಲಿ ಪದವಿ/ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿದ್ದು, ಪ್ರಸಕ್ತ ಸಾಲಿನಿಂದ ಹಲವು ಸಹಕಾರ ಯೋಜನೆ ಹಾಗೂ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಿದೆ. ಪ್ರಸಕ್ತ ಸಾಲಿನಿಂದ ಎಸ್‌ಎಸ್‌ಡಬ್ಲೃ, ಎಂ.ಬಿ.ಎ ವಿಭಾಗದಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ, ಎಂಸಿಎ ಹಾಗೂ 10 ಆನ್ ಲೈನ್ ಕೋರ್ಸ್ ಕೋರ್ಸ್‌ಗಳಿಗೆ ಪ್ರವೇಶಾತಿ ಮಾಡಲಾಗುತ್ತಿದೆ. ಜತೆಗೆ ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿ ಒಂದು ಪದವಿ ಹಾಗೂ ದೂರ ಶಿಕ್ಷಣದಲ್ಲಿ ಮತ್ತೊಂದು ಪದವಿಗೆ ಏಕಕಾಲಕ್ಕೆ ಪ್ರವೇಶಾತಿ ಪಡೆಯುವ ಅವಕಾಶವನ್ನು ಕಲ್ಪಿಸುತ್ತ ಬಂದಿದೆ. ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲದೇ, ತಾಲೂಕು ಕೇಂದ್ರಗಳಲ್ಲೂ ತರಗತಿ ನಡೆಸುವ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ ಒಂದು ಲಕ್ಷ ಪ್ರವೇಶಾತಿ ಸಾಧಿಸಬೇಕು ಎಂಬ ಗುರಿ ಹೊಂದಲಾಗಿದೆ. ಪ್ರತಿಯೊಬ್ಬರು ಕರಾಮುವಿವಿಯ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡೀನ್ ರಾಮನಾಥ್ ರೈ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ. ಜಗದೀಶ್, ಕಲಿಕಾರ್ಥಿ ಸಹಾಯಕ ಕೇಂದ್ರಗಳ ಸಂಯೋಜನಾಧಿಕಾರಿ ಸಿದ್ಧೇಗೌಡ ಇತರರು ಉಪಸ್ಥಿತರಿದ್ದರು.