ಸೋಮವಾರಪೇಟೆ: ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ನ.1ರಂದು 17ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಆರ್.ಉಮೇಶ್ ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ಅಂದು ಸಂಜೆ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ ರೂ. ನಗದು, ದ್ವಿತೀಯ 30 ಸಾವಿರ ರೂ.ನಗದು, ತೃತೀಯ ಬಹುಮಾನ 15 ಸಾವಿರ ರೂ. ನಗದು ಮತ್ತು ಎಲ್ಲ ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕ ಡಾ.ಮಂತರ್‌ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಅಪ್ಪಚ್ಚು ರಂಜನ್, ಉದ್ಯಮಿಗಳಾದ ನಾಪಂಡ ಮುತ್ತಪ್ಪ, ಹರಪಳ್ಳಿ ರವೀಂದ್ರ, ಪವನ್‌ಕುಮಾರ್ ಜೈನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 7.30ಕ್ಕೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನಡೆಸಲಾಗುವುದು. ನಂತರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಗುವುದು. ಬೆಳಗ್ಗೆ 9ಕ್ಕೆ ಕಕ್ಕೆಹೊಳೆ ಬಳಿಯ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅಟೋಗಳಲ್ಲಿ ಮೆರವಣಿಗೆ ತೆರಳಿ ಪಟ್ಟಣದ ಎಲ್ಲ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 10.30 ಗಂಟೆಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿನ ವೇದಿಕೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಇದೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಮಾಡಲಾಗುವುದು. ನೃತ್ಯ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಅ.30 ಕೊನೆಯ ದಿನ. ಮಾಹಿತಿಗಾಗಿ ಮೊ: 97415 33040/ 9900481128 ಸಂಪರ್ಕಿಕಿಸಬಹುದು ಎಂದರು.
ಪದಾಧಿಕಾರಿಗಳಾದ ಜೀವನ್, ಮಹಮ್ಮದ್ ಬೇಟು, ಫೆಲಿಕ್ಸ್, ಶಶಿಕುಮಾರ್ ಇದ್ದರು.