ಹನೂರು: ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹನೂರು ಶೈಕ್ಷಣಿಕ ವಲಯದ 20 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಬಾಲಕರ ವಿಭಾಗದ 100 ಮೀ. ಓಟದಲ್ಲಿ ಹನೂರಿನ ಸರ್ಕಾರಿ ಜಿ.ವಿ ಗೌಡ ಶಾಲೆಯ ಮಹೇಂದ್ರ ದ್ವಿತೀಯ ಸ್ಥಾನ, 200 ಮೀ.ನಲ್ಲಿ ಮಂಗಲ ಸರ್ಕಾರಿ ಶಾಲೆಯ ನಿತೀನ್ ದ್ವಿತೀಯ, 400 ಮೀ.ನಲ್ಲಿ ಮಹದೇಶ್ವರಬೆಟ್ಟದ ಮಹದೇಶ್ವರ ಪ್ರೌಢಶಾಲೆಯ ರಕ್ಷಿತ್ ದ್ವಿತೀಯ, 1500 ಮೀ.ನಲ್ಲಿ ಹೂಗ್ಯಂ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಸುದರ್ಶನ್ ಪ್ರಥಮ, 3,000 ಮೀ.ನಲ್ಲಿ ಮ.ಬೆಟ್ಟದ ಮಹದೇಶ್ವರ ಶಾಲೆಯ ಹರೀಶ್, 4*400 ರಿಲೇನಲ್ಲಿ ಹನೂರಿನ ಕ್ರಿಸ್ತರಾಜ ಶಾಲೆಯ ಪವನ್‌ಕುಮಾರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉದ್ದ ಜಿಗಿತದಲ್ಲಿ ರಾಮಾಪುರ ಸರ್ಕಾರಿ ಪ್ರೌಢಶಾಲೆಯ ಎಸ್. ಶಕ್ತಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ಮ.ಬೆಟ್ಟ ಮಹದೇಶ್ವರ ಶಾಲೆಯ ಲಿಖಿತ್ ಕುಮಾರ್ ದ್ವಿತೀಯ ಸ್ಥಾನ ಪಡೆದು ಜಯ ಗಳಿಸಿದ್ದಾರೆ.
ಇನ್ನು ಬಾಲಕಿಯರ ವಿಭಾಗದಲ್ಲಿ 100 ಹಾಗೂ 200 ಮೀ.ನಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆಯ ಎ. ಮರ್ಲಿನಾ ಕ್ರಮವಾಗಿ ದ್ವಿತೀಯ ಹಾಗೂ ಪ್ರಥಮ ಸ್ಥಾನ, 800 ಮೀ.ನಲ್ಲಿ ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯ ಜೀನಾ ಜೋಸ್ಲೀನ್ ಪ್ರಥಮ, 1500 ಹಾಗೂ 3,000 ಮೀ.ನಲ್ಲಿ ಮಂಗಲ ಸರ್ಕಾರಿ ಶಾಲೆಯ ಪ್ರತಿಭಾ ಪ್ರಥಮ ಸ್ಥಾನ ಪಡೆದಿದ್ದಾರೆ. ಜತೆಗೆ ಉದ್ದ ಜಿಗಿತದಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆಯ ಎ.ಮರ್ಲಿನಾ ಪ್ರಥಮ, ಎತ್ತರ ಜಿಗಿತದಲ್ಲಿ ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯ ಆರ್. ಫೆಲ್ಸಿ, ಗುಂಡು ಎಸೆತದಲ್ಲಿ ಕೌದಳ್ಳಿ ಸರ್ಕಾರಿ ಶಾಲೆಯ ಪಿ.ರೇವತಿ ದ್ವಿತೀಯ ಸ್ಥಾನ ಹಾಗೂ 4*100 ರಿಲೆಯಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆಯ ಎ. ಮೆರ್ಲಿನಾ ತಂಡ ಪ್ರಥಮ ಸ್ಥಾನ ಪಡೆದು ಜಯಗಳಿಸಿದ್ದು, ಇವರೆಲ್ಲರೂ ನ.7 ಮತ್ತು 8 ರಂದು ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಗೈದು ಶೈಕ್ಷಣಿಕ ವಲಯಕ್ಕೆ ಕೀರ್ತಿ ತಂದು ಕೊಟ್ಟಿರುವ ವಿದ್ಯಾರ್ಥಿಗಳು ಹಾಗೂ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಿಇಒ ಗುರುಲಿಂಗಯ್ಯ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹಾದೇವ ಅವರು ಅಭಿನಂದಿಸಿದ್ದು, ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆಗೈಯ್ಯುವಂತಾಗಲಿ ಎಂದು ಆಶಿಸಿದರು.