ಚಿತ್ರದುರ್ಗ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸಿಎಂ ಅನ್ಯಾಯ ಮಾಡಿದ್ದಾರೆ. ಈ ಕುರಿತು ಪ್ರಸ್ತಾಪಿಸಲು ಸದನದಲ್ಲಿ ಅವಕಾಶ ನೀಡಿಲ್ಲ. ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದ್ದೇವೆ. ಆದರೆ, ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡಲಿಲ್ಲ ಎಂದು ಎಂಎಲ್ಸಿ ಕೆ.ಎಸ್.ನವೀನ್ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರದಿಂದಾಗಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಈ ಸಂಬಂಧ ಜನ ಕೇಳ್ಬೇಕು ಅಂದ್ರೆ ಅಧಿಕಾರಿಗಳ್ಯಾರೂ ಕೈಗೆ ಸಿಗುತ್ತಿಲ್ಲ. ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮದಲ್ಲಿ ಪಿಡಿಒ ಕೆಲಸಕ್ಕೆ ಬೇಸತ್ತು ಗ್ರಾಪಂ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಜನಸಾಮಾನ್ಯರಿಗೆ ನೀರಿನ ಗ್ಯಾರಂಟಿ ಸರ್ಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಪರಿಸ್ಥಿತಿ ಕುರಿತು ಅವಲೋಕಿಸುವ ಕೆಲಸ ಸದನದಲ್ಲಿ ಆಗಿಲ್ಲ. ತರಾತುರಿಯಲ್ಲಿ ಹಲವು ಬಿಲ್‌ಗಳನ್ನು ಪಾಸ್ ಮಾಡಿದ್ದಾರೆ. ಪ್ರಾಜೆಕ್ಟ್ ರಿಪೋರ್ಟ್ ಬಿಟ್ಟರೆ, ಜನರ ಮೇಲೆ 1.05 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರೆಸಿದ್ದಾರೆ. ಸದನ ಸಂಪೂರ್ಣ ಸಿದ್ದರಾಮಯ್ಯ ಸುಳ್ಳಿನ ಸಂತೆಯಾಗಿತ್ತು ಎಂದು ದೂರಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ನಯಾ ಪೈಸಾ ನೀಡಿಲ್ಲ. ನೇರ ರೈಲು ಮಾರ್ಗ ಕಡೆಗಣಿಸಲಾಗಿದೆ. ವೈದ್ಯಕೀಯ ಕಾಲೇಜಿಗೆ 520 ಕೋಟಿ ರೂ. ಎಂದವರು ಈಗ 20 ಕೋಟಿ ರೂ. ಕೊಟ್ಟಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣ ದುರುಪಯೋಗದ ಬಗ್ಗೆ ಕೇಳಿದರೆ ಉತ್ತರಿಸಲಿಲ್ಲ ಎಂದು ಬೇಸರಿಸಿದರು.
ಜಾತಿಗಣತಿಗೆ ಬಿಜೆಪಿಯಲ್ಲಿನ ಯಾರ ವಿರೋಧವೂ ಇಲ್ಲ. ಆದರೆ, ಈಗಿನ ಸಿದ್ದರಾಮಯ್ಯ ಅವರ ಜಾತಿಗಣತಿ ಒಪ್ಪಲು ನಾವು ಸಿದ್ಧರಿಲ್ಲ ಎಂದ ಅವರು, ಬಯಲುಸೀಮೆಯ ಎಲ್ಲ ಶಾಸಕರಿಗೆ 1 ಕೋಟಿ ರೂ. ಅನುದಾನ ಕೇಳಿದ್ದೆವು. ಆದರೆ, ಸರ್ಕಾರ ತಲಾ 30 ಲಕ್ಷ ರೂ. ಅನುದಾನ ನೀಡಿದೆ. ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಾಸನ ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ರಾಮದಾಸ್, ವಕ್ತಾರ ದಗ್ಗೆ ಶಿವಪ್ರಕಾಶ್, ಯುವ ಮುಖಂಡ ರಾಮು ಇತರರಿದ್ದರು.