ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹಗುರವಾಗಿ ಮಾತನಾಡಿರುವುದು ಖಂಡನೀಯ. ಅವರು ತಮ್ಮ ಸ್ಥಾನಕ್ಕೆ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ಎಚ್‌ಡಿಕೆಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನೆತನದಲ್ಲಿ ಹುಟ್ಟಿ ಮಾಜಿ ಮುಖ್ಯಮಂತ್ರಿಗಳಾಗಿ, ಇದೀಗ ಕೇಂದ್ರದ ಮಂತ್ರಿಯಾಗಿ ಮತ್ತೊಬ್ಬ ಜನಪ್ರತಿನಿಧಿ ಬಗ್ಗೆ ಅವಾಚ್ಯ ಪದ ಬಳಸುವುದು ಸರಿಯಲ್ಲ. ಎಚ್.ಡಿ. ಕುಮಾರಸ್ವಾಮಿ ಉತ್ತಮ ನಡವಳಿಕೆಯನ್ನು ಕಲಿಯಬೇಕು. ದೊಡ್ಡವರಾಗಿ ಸಣ್ಣ ಬುದ್ಧಿ ಬೇಡ ಎಂದರು.
ಮಾಜಿ ಸಂಸದರ ಸಿ.ಡಿ ಬಿಡುಗಡೆ ವಿಚಾರಕ್ಕೂ ಕಾಂಗ್ರೆಸ್ ಸರ್ಕಾರವನ್ನು ಹೊಣೆ ಮಾಡಿ ಕುಮಾರಸ್ವಾಮಿಯವರು ಮಾತನಾಡಿದ್ದಾರೆ. ಅದರ ಬಗ್ಗೆ ಮಾತನಾಡಿದರೆ ಹಲವು ವಿಚಾರಗಳು ಹೊರ ಬರಲಿವೆ. ಆದರೆ ಅಂತಹ ಅಸಹ್ಯಕರ ವಿವರಗಳನ್ನು ಮಾತನಾಡಲು ನಾನು ಇಷ್ಟಪಡುವುದಿಲ್ಲ. ನಾನು ಅವರನ್ನು ಪ್ರಶ್ನೆ ಮಾಡಿದರೆ ಅವರ ಬಳಿ ಉತ್ತರ ಇಲ್ಲದ ಅನೇಕ ಪ್ರಶ್ನೆಗಳಿಗೆ. ಜತೆಗೆ ಹಾಸನ ಜಿಲ್ಲೆಯಲ್ಲಿ ಸಾರ್ವಜನಿಕರ ಆಸ್ತಿ ಕಬಳಿಸಿರುವ ಹಲವು ಉದಾಹರಣೆಗಳಿವೆ ಎಂದು ಆರೋಪಿಸಿದರು.
ಹಾಸನ ಜಿಲ್ಲೆಗೆ ಜೆಡಿಎಸ್ ಅವಧಿಯಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ನಾವು ಕೂಡ ಹಾಸನ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಸವಾಲು ಹಾಕಿದ ಅವರು, ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುವ ಬದಲು ಕುಮಾರಸ್ವಾಮಿಯವರು ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಎಚ್ಚರಿಕೆ ನೀಡಿದರು.
ಅಮಿತ್ ಶಾ ರಾಜೀನಾಮೆ ನೀಡಲಿ
ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಕೂಡಲೇ ಅಮಿತ್ ಶಾ ಅವರ ರಾಜೀನಾಮೆ ಪಡೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆ ನಡೆಸಲಾಗಿದೆ. ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಈ ವಿಚಾರದಲ್ಲಿ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಲಿದೆ. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೂ ಈವರೆಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲದ ಕೇಂದ್ರ ಗೃಹ ಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಎಚ್ ಲಕ್ಷ್ಮಣ್, ಮಹಿಳಾ ಅಧ್ಯಕ್ಷೆ ತಾರಾ ಚಂದನ್, ಮುಖಂಡರಾದ ದೇವರಾಜೇಗೌಡ, ಪ್ರಸನ್ನ, ಇತರರು ಉಪಸ್ಥಿತರಿದ್ದರು.