ಚಿತ್ರದುರ್ಗ: ರಾಜ್ಯ ಗೊಲ್ಲ ಯಾದವ ಸಂಘಕ್ಕೂ ಕರ್ನಾಟಕದ ಮೂಲ ನಿವಾಸಿಗಳು, ಬುಡಕಟ್ಟು, ಅಲೆಮಾರಿ ಸಮುದಾಯದ ಕಾಡು ಗೊಲ್ಲರಿಗೂ ಯಾವ ಸಂಬಂಧವಿಲ್ಲ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ತಿಳಿಸಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಏ.20ರಂದು ಆಯೋಜಿಸಿರುವ ಗೊಲ್ಲ ಯಾದವ ಕಾರ್ಯಕ್ರಮದಲ್ಲಿ ಕಾಡುಗೊಲ್ಲರ‌್ಯಾರೂ ಪಾಲ್ಗೊಳ್ಳುವುದಿಲ್ಲ. ಸಮುದಾಯದ ಹೆಸರು ಬಳಸಿರುವ ಎಂಎಲ್ಸಿ ಡಿ.ಟಿ.ಶ್ರೀನಿವಾಸ್ ಹೇಳಿಕೆ ಖಂಡಿಸುತ್ತೇವೆ ಎಂದರು.
ಇದೇ ಶ್ರೀನಿವಾಸ್ ತಂಡದವರು ರಾಜ್ಯದಲ್ಲಿ ಕಾಡುಗೊಲ್ಲರನ್ನು ನಿಂದಿಸಿದ್ದು ಇದೆ. ಕಟ್ಟೆ ಮನೆ, ಅಂಬು, ಕಣತಿ, ಅಮಾಸೆ, ಹಟ್ಟಿ ಕಟ್ಟಿಕೊಂಡು ದನ-ಕರು, ಕುರಿ-ಮೇಕೆ, ಎತ್ತು-ಎಮ್ಮೆ ಸೇರಿ ಪಶು ಸಂಗೋಪನೆಯೊಂದಿಗೆ ಬದುಕು ಕಟ್ಟಿಕೊಂಡಿದ್ದೇವೆ. ಕಾಡುಗೊಲ್ಲ, ಹಟ್ಟಿ ಗೊಲ್ಲ, ಅಡವಿಗೊಲ್ಲ ಇತರೆ ಉಪ ಪಂಗಡಗಳಲ್ಲಿ ಜನನದಿಂದ ಮರಣದವರೆಗೆ ಬುಡಕಟ್ಟು ಜೀವ ವೈವಿಧ್ಯದಿಂದ ಇತರೆ ಎಲ್ಲ ಸಮುದಾಯಗಳ ಜೊತೆಗೆ ಸೌಹಾರ್ದದಿಂದ ಜೀವಿಸುತ್ತಿದ್ದು, ಸಮುದಾಯಕ್ಕೆ ಇತಿಹಾಸವಿದೆ ಎಂದರು.
ರಾಜ್ಯದ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಇತರೆ ಜಿಲ್ಲೆಗಳಲ್ಲಿ ಕಾಡುಗೊಲ್ಲರು ಇದ್ದಾರೆ. ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಆದರೆ, ಆರಂಭದಿಂದಲೂ ನೀವು ನಮ್ಮ ಅಭಿವೃದ್ಧಿಗೆ ಬರೆ ಎಳೆದಿದ್ದೀರಿ. ಕೆಲ ವಿಚಾರಗಳನ್ನು ಖಂಡಿಸಿದ್ದೀರಿ. ಸಮುದಾಯದ ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಕಿಡಿಕಾರಿದರು.
ಸಂಘದ ಮಾಜಿ ಜಿಲ್ಲಾಧ್ಯಕ್ಷ ಮೀಸೆ ಮಹಲಿಂಗಪ್ಪ ಮಾತನಾಡಿ, ಊರು ಗೊಲ್ಲರು ಮತ್ತು ಕಾಡುಗೊಲ್ಲರು ಪ್ರತ್ಯೇಕ. ಆದರೆ, ನಮ್ಮ ಸಮುದಾಯವನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯ, ಸಾಮಾಜಿಕ, ಆರ್ಥಿಕ ಇತರೆ ರಂಗಗಳಲ್ಲಿ ನಮ್ಮವರಿಗೆ ಅನ್ಯಾಯ ಮಾಡಿದ್ದೀರಿ. ಸಮಾಜದ ಮುಗ್ಧರಲ್ಲಿ ತಪ್ಪು ತಿಳಿವಳಿಕೆ ಬರುವಂತೆ ನಾವೆಲ್ಲರೂ ಗೊಲ್ಲರು, ಯಾದವರು ಎಂಬ ಸುಳ್ಳು ಹೇಳಿ ವಂಚಿಸುವುದರ ವಿರುದ್ಧ ನಮ್ಮ ಸಂಘ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದ 12 ಜಿಲ್ಲೆಯ 40 ತಾಲೂಕು ಹಾಗೂ ಆಂಧ್ರಪ್ರದೇಶ ರಾಜ್ಯದ 3 ತಾಲೂಕುಗಳಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದೇವೆ. ಸಮುದಾಯಕ್ಕಾಗಿ ಪ್ರತ್ಯೇಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದ್ದು, ಅದರಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇನ್ನಾದರೂ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್, ಮುಖಂಡರಾದ ಆನಂದ್, ದೊಡ್ಡಯ್ಯ ಇತರರಿದ್ದರು.