ಚಾಮರಾಜನಗರ: ಸುತ್ತೂರಿನ ಶ್ರೀಡಾ.ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ತಿಳಿಸಿದರು.
ತಾಲೂಕಿನ ಮರಿಯಾಲ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಜೆಎಸ್‌ಎಸ್ ಗ್ರಾಮೀಣ ಇನ್ಕ್ಯುಬೇಶನ್ ಮತ್ತು ಕೌಶಲ್ಯ ಅಭಿವೃದ್ದಿ ಕೇಂದ್ರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರು ಭಾಗದಲ್ಲಿ ಸುತ್ತೂರು ಶ್ರೀಕ್ಷೇತ್ರ ಹಾಗೂ ಮಹಾವಿದ್ಯಾಪೀಠ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ರಾಜೇಂದ್ರಶ್ರೀಗಳು ವಿದ್ಯಾ ಸಂಸ್ಥೆಯನ್ನು ಬಹಳ ಕಷ್ಟಪಟ್ಟು ಮತ್ತು ದೂರದೃಷ್ಟಿಯಿಂದ ಕಟ್ಟುವ ಮೂಲಕ ಬಡವರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಆಶಯವನ್ನು ಹೊಂದಿದ್ದರು. ರಾಜೇಂದ್ರ ಶ್ರೀಗಳಲ್ಲಿ ಶಿಕ್ಷಣದ ಬಗ್ಗೆ ಇದ್ದ ಕಾಳಜಿಯನ್ನು ನಾವೆಲ್ಲರು ಸ್ಮರಿಸಿಕೊಳ್ಳಬೇಕು ಎಂದರು.
ನಗರದ ವಿರಕ್ತಮಠದ ಶ್ರೀಚನ್ನಬಸವಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳು ಶಿಕ್ಷಣದ ಮೂಲಕ ಅಂಧಕಾರವನ್ನು ಹೋಗಲಾಡಿಸಿದರು. ಅವರ ಸಂಕಲ್ಪ ಹಾಗೂ ದೂರದೃಷ್ಟಿತ್ವ ಆಡಳಿತದ ಫಲವಾಗಿ ಜೆಎಸ್‌ಎಸ್ ಸಂಸ್ಥೆಯ ಎಲ್ಲಾ ವಿಭಾಗದಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಕೆ.ಸಿ.ಬಸವಣ್ಣ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ಎಚ್.ಪಿ.ಶ್ರೀಕಂಠಾರಾಧ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕಾಲೇಜಿನ ಉಪನ್ಯಾಸಕರಾದ ವೈ.ಎಂ. ರವಿಚಂದ್ರ, ಬಿ.ಎಂ.ಚಂದ್ರಶೇಖರ, ಎನ್.ಮಹದೇವಸ್ವಾಮಿ, ಎಂ.ಪಿ.ಸದಾಶಿವಮೂರ್ತಿ, ಕುಸುಮರಾಣಿ, ಆರ್.ಮಂಜುನಾಥ್ ಇತರರು ಹಾಜರಿದ್ದರು.