ಹಾಸನ: ಹಾಸನ ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾ.19ರಿಂದ ಮಾ.28ರವರೆಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಸೇ ನೋ ಟು ನಾರ್ಕೋಟಿಕ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಮೊದಲಿಗೆ ಕ್ರೀಡಾ ಸ್ಪರ್ಧೆಗಳ ಮೂಲಕ ಅರಂಭವಾದ ಈ ಸಂಭ್ರಮ ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಸಮಾರಂಭಕ್ಕೆ ಮೆರಗು ನೀಡಲಾಯಿತು. ಕ್ರೀಡಾ ಚಟುವಟಿಕೆಯಲ್ಲಿ ಸಿಎಸ್‌ಇ ವಿಭಾಗ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇ/ಸಿ ವಿಭಾಗವು ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.
ನಂತರ ಸಾಂಪ್ರದಾಯಿಕವಾಗಿ ಗುರುವಾರ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ಎಂಸಿಎಫ್ ಉಪನಿರ್ದೇಶಕ ಕೆ. ಕಿರಣ್ ಅವರು ಮಾತನಾಡಿ, ರಾಜೀವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ. ಡಾ. ವಿ. ರಾಜೀವ್ ಅವರು ಜೀವನದ ಯಶಸ್ಸಿಗೆ ಶಿಕ್ಷಣವೇ ಅತ್ಯುತ್ತಮ ಮಾರ್ಗ ಎಂಬ ಮಾತನ್ನು ಹೇಳುತ್ತಿದ್ದರು. ಅದರಂತೆ ಇಂದು ಇಂತಹ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸಾಧ್ಯವಾಗಿದೆ ಎಂದು ಹೇಳಿದ ಅವರು ಉಪಗ್ರಹಗಳ ಉಡಾವಣೆಯಿಂದಾಗುವ ಹಲವು ಉಪಯೋಗಗಳನ್ನು ಕೂಲಂಕಷವಾಗಿ ವಿವರಿಸಿದರು.
ಕಾರ್ಯಕ್ರಮದ ಅಂತಿಮ ದಿನವಾದ ಶುಕ್ರವಾರ ಖ್ಯಾತ ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಹಾಗೂ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು.
ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಬಿ.ಎಚ್.ರಂಗಸ್ವಾಮಿ, ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ.ಕೆ. ಮಹೇಶ್, ಸಂಸ್ಥೆಯ ಉಪಾಧ್ಯಕ್ಷ ಡಾ.ರಂಜಿತ್ ರಾಜೀವ್, ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ, ಎಲ್ಲ ವಿಭಾಗದ ಮುಖ್ಯಸ್ಥರು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.