ಜಿಲ್ಲೆ

ರಾಜೀನಾಮೆ ನೀಡಿ, ತನಿಖೆ ಎದುರಿಸಲಿ

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಒಪ್ಪಿ, ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಮೋಕಾ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಇಂತಹ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ಸ್ವತಃ ಸಂವಿಧಾನದ ಮುಖ್ಯಸ್ಥ ಸಿದ್ದರಾಮಯ್ಯ ಮೇಲೆ ನೀಡಿದ ದೂರಿನ ತನಿಖೆ ಮಾಡದೆ ಇದ್ದಲ್ಲಿ, ಸಂವಿಧಾನದ ಆಶಯ, ಜನರಲ್ಲಿ ಸಂವಿಧಾನದ ಬಗೆಗಿನ ನಂಬಿಕೆ, ಆ ನಂಬಿಕೆ ಹೊರಟು ಹೋಗಲಿದೆ. ಕಾಂಗ್ರೆಸ್ ಪಕ್ಷದ ಡಿಎನ್‌ಎ ಎಂದರೆ ಅದು ಭ್ರಷ್ಟಾಚಾರ. ಸುಮಾರು 14 ಲಕ್ಷ ಕೋಟಿ ರೂ. ಮೊತ್ತದ ಭ್ರಷ್ಟಾಚಾರದ ಹಗರಣಗಳ ಜತೆಗೆ ಮುಡಾ ಹಗರಣವೊಂದು ಸೇರಿದೆ. ಸಂವಿಧಾನದ ಮೌಲ್ಯ ಮತ್ತು ಆ ನಂಬಿಕೆ ಉಳಿಸಲು ಪಾರದರ್ಶಕ ತನಿಖೆ ಆಗಬೇಕು. ಈ ಹಿಂದೆ ಅಡ್ವಾಣಿಯವರ ಮೇಲೆ ಇದೆ ತರಹ ಆಕ್ಷೇಪ ವ್ಯಕ್ತವಾಗಿತ್ತು. ರಾಮಕೃಷ್ಣ ಹೆಗಡೆ ಅವರ ಮೇಲೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಕೂಡ ಆರೋಪ ಬಂದಿತ್ತು. ಅವರೆಲ್ಲರೂ ವಿಚಾರಣೆ ಎದುರಿಸಿದ್ದರು. ಬಳಿಕ ವಿಚಾರಣೆಯಲ್ಲಿ ತಪ್ಪಿತಸ್ಥರಲ್ಲ ಎಂದು ಪ್ರಕಟಿಸಿದ ಬಳಿಕ ಮತ್ತೆ ಸಾರ್ವಜನಿಕ ಜೀವನಕ್ಕೆ ಬಂದರು ಎಂದು ನೆನೆಪಿಸಿದರು.

ಪ್ರಮುಖರಾದ ಮುಖಂಡರಾದ ರಾಮಲಿಂಗಪ್ಪ , ಸೋಮನಗೌಡ, ಮಲ್ಲೇಶ, ರಘು ಇದ್ದರು.