ಜಿಲ್ಲೆ

ರಾಜೀ ಮೂಲಕ ಇತ್ಯರ್ಥಗೊಳಿಸಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಕೀಲರ ದಿನಾಚರಣೆ ನಿಮಿತ್ತ ಹುಬ್ಬಳ್ಳಿ ವಕೀಲರ ಸಂಘದಿಂದ ನಗರದ ಹೊಸಕೋರ್ಟ್​ನ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ವಕೀಲರು ಹಾಗೂ ಸಂಘದ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.

ಸಂಘದ ಆಜೀವ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗದಲ್ಲಿ ವಕೀಲರ ಪಾತ್ರ ಬಹುಮುಖ್ಯ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯರ್ಥವಾಗದೇ ಬಹಳಷ್ಟು ಬಾಕಿ ಉಳಿದಿವೆ. ಈ ಹೊರೆ ಕಡಿಮೆಗೊಳಿಸಲು ವಕೀಲರು, ರಾಜೀ ಮೂಲಕ ಇತ್ಯರ್ಥ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಸತ್ಯ ಶೋಧನೆಯಲ್ಲಿ ಸಹಕಾರ ನೀಡಿದಾಗ ಮಾತ್ರ ನ್ಯಾಯಾಲಯಗಳ ಉದ್ದೇಶ ಈಡೇರಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ವಕೀಲರು ವೃತ್ತಿ ಘನತೆ ಕಾಪಾಡಿಕೊಂಡರೆ ಯಶಸ್ಸು ಕಟ್ಟಿಟ್ಟದ್ದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಟ್ಟಡದಿಂದ ನ್ಯಾಯಾಲಯದ ಕಟ್ಟಡಕ್ಕೆ ತೆರಳಲು ಮೇಲ್ಸೇತುವೆಯ ತಾಂತ್ರಿಕ ಎಕ್ಸಲೇಟರ್ ಅಳವಡಿಸಬೇಕು ಎಂದು ವಿನಂತಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್, ಎಂಎಲ್​ಸಿ ಪ್ರದೀಪ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಸುವರ್ಣಾ ಮಿರ್ಜಿ, ಇಂದಿರಾ ಮೇಲಸ್ವಾಮಿ ಚಿಟ್ಟಿಯಾರ, ಎಸ್.ಡಿ. ಕಂದ್ರಾಳೆ, ರಾಘವೇಂದ್ರ ಆರ್., ಗಣಪತಿ ಪ್ರಶಾಂತ ಎಂ., ಪ್ರಿಯಾ ಕೆ., ನಾಗೇಶ ನಾಯ್ಕ, ರಕ್ಷತಾ ಎಸ್., ಅನುರಾಧ ಎಚ್.ಟಿ., ತ್ರಿವೇಣಿ ಇರಗಾರ, ಸಂಘದ ಉಪಾಧ್ಯಕ್ಷ ಐ.ಕೆ. ಬೆಳಗಲಿ, ಕೋಶಾಧ್ಯಕ್ಷ ಎಸ್.ಜಿ. ಅರಗಂಜಿ, ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಇತರರು ಇದ್ದರು.