ಬಸವಕಲ್ಯಾಣ: ಜನತಾ ನ್ಯಾಯಾಲಯದಲ್ಲಿ ಕೌಟುಂಬಿಕ ಸಮಸ್ಯೆ ಸೇರಿದಂತೆ ಇತರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವುದರಿಂದ ಸಮಯ, ಹಣ ಉಳಿಸುವ ಜತೆಗೆ ನೆಮ್ಮದಿ ಜೀವನ ನಡೆಸಬಹುದಾಗಿದೆ ಎಂದು ೨ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಯಶವಂತ ಆರ್.ತವಾರೆ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ್, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಶಾಶ್ವತ ಜನತಾ ನ್ಯಾಯಾಲಯದ ಬಗ್ಗೆ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೌಟುಂಬಿಕ ಸಮಸ್ಯೆ, ಬ್ಯಾಂಕ್ ಹಣಕಾಸಿನ ವ್ಯವಹಾರ, ಆಸ್ತಿಪಾಲು ಹಾಗೂ ಇತರ ಪ್ರಕರಣಗಳನ್ನು ಕಕ್ಷಿದಾರರು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಶಾಶ್ವತ ಲೋಕ ಅದಾಲತ್ ಮಹತ್ವ ಮತ್ತು ಅದರ ಕಾರ್ಯವೈಖರಿ ಕುರಿತು ವಕೀಲ ಎಸ್.ಬಿ.ಮಾಶಾಲಕರ್ ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ, ಸಿವಿಲ್ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ ಮಾಳಗಿ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷೆ ರೇಣುಕಾ ಮಠಪತಿ, ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಬಾಲಾಜಿ ಅದೆಪ್ಪ, ಜಗದೇವಿ ಚೊಂಡೆ, ಅರವಿಂದ ಸಿಂಗೋಡೆ, ವಕೀಲ ರಾಜಕುಮಾರ ಮುಡಬೆ ಇತರರಿದ್ದರು. ವಕೀಲ ಜಿ.ಪಿ ಗುರ್ಜರ ಸ್ವಾಗತಿಸಿದರು. ವಕೀಲ ಸಂಜುರೆಡ್ಡಿ ನಿರೂಪಣೆ ಮಾಡಿದರು.