ಜಿಲ್ಲೆ

ರಾಜಾರೋಷವಾಗಿ ಭ್ರಷ್ಟಾಚಾರದ ವ್ಯಾಪ್ತಿ ವಿಸ್ತರಿಸಿದೆ

ಚಿತ್ರದುರ್ಗ: ಭ್ರಷ್ಟಾಚಾರ ಎಂಬುದು ನೆನ್ನೆ, ಮೊನ್ನೆಯದ್ದಲ್ಲ. ಹಿಂದಿನಿಂದಲೂ ಕದ್ದು ಮುಚ್ಚಿ ನಡೆಯುತ್ತಿದ್ದು, ಈಗ ರಾಜಾರೋಷವಾಗಿ ವ್ಯಾಪ್ತಿ ವಿಸ್ತರಿಸಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮೂರು ದಿನ ನಡೆಸಿದ ನಿರಶನ ಗುರುವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿತು.

ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಗಣಿಬಾಧಿತ ಭೂ ಪ್ರದೇಶವಾದ ಭೀಮಸಮುದ್ರ ಹೋಬಳಿಯ ಸುತ್ತಮುತ್ತಲಿನ ಸಮಸ್ಯೆ ಪರಿಹರಿಸುವಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೇಶದಲ್ಲಿ ಆಡಳಿತ ನಡೆಸಿದ ಬಹುತೇಕ ಸರ್ಕಾರಗಳು ಭ್ರಷ್ಟಾಚಾರ ನಡೆಸಿವೆ. ಅನೇಕ ಹಗರಣಗಳು ಸರಿಯಾದ ರೀತಿಯಲ್ಲಿ ತನಿಖೆಯಾಗದೆ, ಮುಚ್ಚಿ ಹಾಕಲಾಗುತ್ತಿದೆ. ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿರುವಾಗ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದಿಂದ ರಾಜ್ಯದ ಅನೇಕ ಬಡ ಮಕ್ಕಳು ಇಂಜಿನಿಯರ್, ವೈದ್ಯರು ಸೇರಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿಲ್ಲ. ಗುಣಮಟ್ಟದ ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ನಮ್ಮಲ್ಲಿ ಅಧಿಕಾರ, ಹಣವಿದ್ದವರಿಗೆ ಸ್ಥಾನ-ಮಾನ, ಗೌರವ ಲಭ್ಯವಾಗುತ್ತ್ತಿದೆ. ಇದರ ತಡೆಗೆ ದೊಡ್ಡಮಟ್ಟದ ಕ್ರಾಂತಿಯಾದಾಗ ಹಂತ-ಹಂತವಾಗಿ ಕಡಿಮೆ ಮಾಡಲು ಸಾಧ್ಯವಿದ್ದು, ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ ಮಾತನಾಡಿ, ದೆಹಲಿಯಲ್ಲಿನ ಎಎಪಿ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಹಣವನ್ನು ಅಭಿವೃದ್ಧಿಗೆ ಬಳಕೆ ಮಾಡುತ್ತಿದೆ. ಹೀಗಾಗಿ ಅಲ್ಲಿನ ಜನರಿಗೆ ಆರೋಗ್ಯ, ಶಿಕ್ಷಣ, ಸಾರಿಗೆ ವ್ಯವಸ್ಥೆ ಉಚಿತವಾಗಿ ದೊರೆಯುತ್ತಿದೆ. ಈ ಮಾದರಿ ದೇಶದೆಲ್ಲ ರಾಜ್ಯಗಳಲ್ಲೂ ಆಗಬೇಕಿದೆ. ಅದಕ್ಕಾಗಿ ಮತದಾರರು ಬದಲಾಗಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ಜಿಲ್ಲಾಸ್ಪತ್ರೆ, ಆರ್‌ಟಿಒ, ಸಬ್ ರಿಜಿಸ್ಟ್ರರ್, ತಾಲೂಕು, ಗ್ರಾಪಂ ಸೇರಿ ಅನೇಕ ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ, ಕೆಲಸ ಆಗುವುದಿಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸರು ಆಗಿಂದಾಗ್ಗೆ ದಾಳಿ ನಡೆಸಬೇಕು. ಜಿಲ್ಲಾಧಿಕಾರಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸಿಎಸ್‌ಆರ್ ಅನುದಾನದಡಿ ಗಣಿಬಾಧಿತ ಪ್ರದೇಶವಾದ ಮೇಗಳಹಳ್ಳಿ, ಭೀಮಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಕೋರಿದರು.

ರಾಜ್ಯ ಕಾರ್ಯದರ್ಶಿಗಳಾದ ಬಸವರಾಜು ಮುದಿಗೌಡ, ಉಷಾ ಮೋಹನ್, ಪದಾಧಿಕಾರಿಗಳಾದ ಲೋಕೇಶ್, ರಾಮಪ್ಪ, ಜ್ಯೋತಿ ಲಕ್ಷ್ಮೀ, ವಿನೋದಮ್ಮ, ಶಿವಮ್ಮ, ಸೈಯದ್ ತನ್ವೀರ್, ಸೈಯದ್ ದಾವೂದ್, ಮಲ್ಲಿಕಾರ್ಜುನಪ್ಪ, ಲೋಕೇಶಪ್ಪ, ರವಿ, ರಾಜು, ಲೋಹಿತ್, ಚಂದ್ರಮ್ಮ, ಪರಮೇಶ್ವರಪ್ಪ ಇತರರಿದ್ದರು.