ಜಿಲ್ಲೆ

ರಾಜಯೋಗ ಕರ್ಮ ಸಿದ್ಧಾಂತದಿಂದ ಅಪರಾಧಕ್ಕೆ ಕಡಿವಾಣ

ಜಗತ್ತಿನಾದ್ಯಂತ ಅಪರಾಧಗಳು ಜಾಸ್ತಿಯಾಗುತ್ತಿದ್ದು, ಇದರ ನಿರ್ಮೂನೆಗಾಗಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸುವ ರಾಜಯೋಗ ಕರ್ಮ ಸಿದ್ಧಾಂತ ಸಹಕಾರಿಯಾಗಲಿದೆ ಎಂದು ನಿವೃತ್ತ ಎಸ್‌ಪಿ ನಾಗಪ್ಪ ಅಭಿಪ್ರಾಯಪಟ್ಟರು.


ಸರದಾರ್ ವಲ್ಲಭಬಾಯಿ ಪಟೇಲ್‌ನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ರಾಜಯೋಗ ಆಧ್ಯಾತ್ಮಿಕ ಶಿಕ್ಷಣ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.


ಈ ಸಂಸ್ಥೆಯು 1936ರಲ್ಲಿ ಸಣ್ಣ ಮಹಿಳಾ ಸಂಘಟನೆಯೊಂದಿಗೆ ಪ್ರಾರಂಭವಾಗಿ ಪ್ರಸ್ತುತ ವಿಶ್ವದಾದ್ಯಂತ 147 ರಾಷ್ಟ್ರಗಳಿಗೆ ಅತಿ ಕಡಿಮೆ ಸಮಯದಲ್ಲಿ ತಲುಪಿರುವುದು ಶಾಘ್ಲನೀಯ. ಇಲ್ಲಿನ ಶಾಂತಿಮಂತ್ರ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಿದೆ. ಜನರಿಗೆ ತಾವು ಮಾಡುವ ಕರ್ಮಗಳ ಆದಿ, ಮಧ್ಯ, ಅಂತ್ಯದ ಫಲಿತಾಂಶ ಅರಿಯದೆ ಇರುವ ಕಾರಣ ಅಪರಾಧಗಳು, ಪೊಲೀಸ್ ಠಾಣೆಗಳು, ಕೋರ್ಟ್‌ಗಳು ಜಾಸ್ತಿಯಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.


ಹಿರಿಯ ಆಧ್ಯಾತ್ಮಿಕ ಚಿಂತಕ ಬಿ.ಕೆ.ರಂಗನಾಥ್ ಮಾತನಾಡಿ, ಜಗತ್ತು ಅಶಾಂತಿಯಿಂದ ತತ್ತರಿಸುತ್ತಿದ್ದು, ಶಾಂತಿ ಅವಶ್ಯಕತೆಯಿದೆ. ಇದನ್ನು ಕಲಿಸುವ ದೃಷ್ಟಿಯಿಂದ ಈ ಸೇವಾ ಕೇಂದ್ರ ತೆರೆಯಲಾಗಿದೆ ಎಂದರು.


ಸಹಾಯಕ ಪೋಲಿಸ್ ಆಯುಕ್ತ ಗಜೇಂದ್ರ ಪ್ರಸಾದ್ ಮಾತನಾಡಿ, ಉನ್ನತ ಚಿಂತನೆ, ಆಚಾರ ವಿಚಾರದಲ್ಲಿ ಸರಳತೆ, ಕೆಟ್ಟ ಅಭ್ಯಾಸಗಳಿಂದ ದೂರವಿದ್ದರೆ ಖಂಡಿತ ಮನಶಾಂತಿ ಕಂಡುಕೊಳ್ಳಬಹುದು ಎಂದರು.


ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಮಾತನಾಡಿ, ಇಲ್ಲಿ ಕಲಿಸುವ ರಾಜಯೋಗ ಶಿಕ್ಷಣವು ಮನುಷ್ಯನ ಸರ್ವತೋಮುಖ ಪ್ರಗತಿಗೆ ಪೂರಕವಾಗಿದೆ ಎಂದರು. ಉಪನ್ಯಾಸಕ ಪಂಡಿತ್ ಸಿದ್ದಲಿಂಗಸ್ವಾಮಿ, ಎಸ್‌ಬಿಐ ನಿವೃತ್ತ ಮ್ಯಾನೇಜರ್ ರಂಗಸ್ವಾಮಿ, ನಿವೃತ್ತ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿದರು.


ಬಿಕೆ ರಾಮಚಂದ್ರ, ಬಿಕೆ ರಶ್ಮಿ, ಬಿಕೆ ಶಿವಲೀಲಾ, ಬಿಕೆ ಮಂಜುಳಾ ಇತರರು ಇದ್ದರು. ಬಡಾವಣೆಯ ಬೀದಿಗಳಲ್ಲಿ ರಾಜಯೋಗ ವಿದ್ಯಾರ್ಥಿಗಳು ಹಾಗೂ ಬ್ರಹ್ಮಕುಮಾರ, ಬ್ರಹ್ಮಾಕುಮಾರಿಯರಿಂದ ಶೋಭಾಯಾತ್ರೆ ನಡೆಯಿತು.