ಜಿಲ್ಲೆ

ರಾಜಮಾತೆ ಉಚ್ಚಂಗಿಯಲ್ಲಮ್ಮ ಜಾತ್ರೆ ನಾಳೆಯಿಂದ

ಚಿತ್ರದುರ್ಗ: ರಾಜಮಾತೆ ಉಚ್ಚಂಗಿಯಲ್ಲಮ್ಮ ದೇವಿಯೂ ರಾಜಬೀದಿ ಕೋಟೆ ರಸ್ತೆಯಲ್ಲಿ ವಿರಾಜಮಾನಳಾಗಿ ನೆಲೆನಿಂತು, ಭಕ್ತರ ಪೊರೆವ ಹಾಗೂ ಇಷ್ಟಾರ್ಥ ಈಡೇರಿಸುವ ನಗರದೇವತೆಯಾಗಿದ್ದಾಳೆ. ಅಮ್ಮನ ಜಾತ್ರೆಗೆ ಕೋಟೆನಗರಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, ಮೇ 14ರಂದು ಅಭಿಷೇಕ ಸೇವೆ, ಸಾರು ಹಾಕುವ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಲಿದೆ.

ಇಲ್ಲಿನ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಯೂ ಆದ ಉಚ್ಚಂಗೆಮ್ಮ ಐತಿಹಾಸಿಕ ಕೋಟೆನಾಡಿನ ಪಾಳೆಗಾರರ ಕುಲದೇವತೆ. ಹೀಗಾಗಿ 1666ರಲ್ಲಿ ದೇವಿಯ ಮೂಲ ಉಚ್ಚಂಗಿದುರ್ಗದಿಂದ ಚಿತ್ರದುರ್ಗಕ್ಕೆ ಪಾಳೆಗಾರರು ಕರೆತಂದು ದೊಡ್ಡಪೇಟೆಯಲ್ಲಿ ಪೂರ್ವಾಭಿಮುಖವಾಗಿ ನೆಲೆಯೂರಲು ಕಾರಣರಾಗಿದ್ದಾರೆ. ಬಿಚ್ಚುಗತ್ತಿ ಭರಮಣ್ಣನಾಯಕರ ಆಳ್ವಿಕೆಯ 17ನೇ ಶತಮಾನದ ಕೊನೆಯಲ್ಲಿ ವಿಶಾಲವಾದ ದೇಗುಲ ನಿರ್ಮಾಣವಾಗಿದೆ.

ದೇವಿಯ ದೇಗುಲ ಮುಂಭಾಗ 30 ಅಡಿ ಎತ್ತರದ ದೀಪಸ್ತಂಭವಿದೆ. ಸ್ವಲ್ಪ ದೂರದಲ್ಲೇ ಉಯ್ಯಲೆ ಕಂಬವೂ ಇದೆ. ಉತ್ಸವಾಚರಣೆಗಳ ವೇಳೆ ಇಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕಟ್ಟಿ ತೂಗುವ ಸಂಪ್ರದಾಯ ಇತ್ತು. ಈಚೆಗೆ ಉಯ್ಯಲೋತ್ಸವವೂ ಅದ್ದೂರಿಯಾಗಿ ಜರುಗಿತ್ತು.

ಎಂಟ್ಹತ್ತು ದಿನದ ವೈಭವದ ಜಾತ್ರೆ: ದೇವಿಯ ಜಾತ್ರೆಯೂ ವೈಶಾಖ ಮಾಸದಲ್ಲಿ ವಿಶೇಷವಾಗಿ 15 ದಿನ ನಡೆದರೂ ಎಂಟ್ಹತ್ತು ದಿನ ಅತ್ಯಂತ ವೈಭವದಿಂದ ಜರುಗಲಿದೆ. ಮೇ 18ರಂದು ಬೆಳಗ್ಗೆ 11ಕ್ಕೆ ಕಂಕಣಧಾರಣೆ, ಮದಲಿಂಗಿತ್ತಿಯ ಪೂಜೆ, ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಸಿಂಹ ಉತ್ಸವ. 19ರಂದು ಬೆಳಗ್ಗೆ 8ಕ್ಕೆ ಅಭಿಷೇಕ, ರಾತ್ರಿ 8.30ಕ್ಕೆ ಸರ್ಪೋತ್ಸವ, 20ರಂದು ರಾತ್ರಿ 9ಕ್ಕೆ ನವಿಲು ವಾಹನೋತ್ಸವದ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಮೂರು ದಿನವೂ ಬುರುಜನಹಟ್ಟಿಗೆ ಕರೆತರಲಿದ್ದಾರೆ. ಈ ವೇಳೆ ಭಕ್ತರಿಂದ ಪೂಜೆ ಸಲ್ಲಿಕೆಯಾಗಲಿದೆ.

ಅಶ್ವವಾಹನೋತ್ಸವ 22ಕ್ಕೆ: 21ರಂದು ಬೆಳಗ್ಗೆ 8ಕ್ಕೆ ಅಭಿಷೇಕ, 22ರಂದು ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಅಶ್ವವಾಹನದ ಮೇಲೆ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪುರ ಪ್ರವೇಶ. ಬೆಳಗ್ಗೆ 9ರಿಂದ ಆರಂಭವಾಗಿ ಮಧ್ಯಾಹ್ನ 3ರವರೆಗೂ ರಾಜಬೀದಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ಜರುಗಲಿದೆ.

24ರಂದು ದೇವಿಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಸಕಲ ಮಂಗಳವಾದ್ಯಗಳೊಂದಿಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೂ ರಾಜಬೀದಿಗಳಲ್ಲಿ ರಥೋತ್ಸವ ಮೆರವಣಿಗೆ. ಕೋಟೆ ರಸ್ತೆ, ಚಿಕ್ಕಪೇಟೆ, ಬುರುಜನಹಟ್ಟಿ, ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲಾ ರಸ್ತೆ, ವಾಸವಿ ವಿದ್ಯಾಸಂಸ್ಥೆ, ದೊಡ್ಡಪೇಟೆ, ಉಜ್ಜಯನಿಮಠದ ರಸ್ತೆ, ಜೋಗಿಮಟ್ಟಿ ರಸ್ತೆ, ಜಟ್‌ಪಟ್‌ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್, ಏಕನಾಥೇಶ್ವರಿ ದೇವಿ ಪಾದದ ಗುಡಿ ಮಾರ್ಗವಾಗಿ ಸಂಚರಿಸಿ, ಪುನಃ ದೇಗುಲ ತಲುಪಲಿದೆ. ಈ ವೇಳೆ ಭಕ್ತರಿಂದ ಮೀಸಲು, ಪೂಜೆ ಸ್ವೀಕಾರ ನೆರವೇರಲಿದೆ.

25ರಂದು ದೇವಿಗೆ ಭಂಡಾರದ ಪೂಜೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಜೆ 6ಕ್ಕೆ ‘ಸಿಡಿ’ ಮಹೋತ್ಸವ ಜರುಗಲಿದೆ. 26ರಂದು ದೇವಿಗೆ ಅಭಿಷೇಕ, ಜೋಗಪ್ಪ-ಜೋಗಮ್ಮರಿಂದ ಓಕುಳಿ ಸೇವೆ ನಡೆಯಲಿದೆ. 28ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

ಈ ಎಲ್ಲ ಪೂಜಾ ಕೈಂಕರ್ಯದಲ್ಲೂ ದೇವಿಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮುಜರಾಯಿ ಇಲಾಖೆ, ರಾಜ ಉತ್ಸವಾಂಬ ದೇವಸ್ಥಾನ, ಭಕ್ತಮಂಡಳಿ ಮನವಿ ಮಾಡಿದೆ.

ದೇವಿಯ ಆಜ್ಞೆ ಮೇರೆಗೆ ಹೊಂಡ: ಪ್ರತಿ ವರ್ಷ ನವರಾತ್ರಿಯಲ್ಲಿ ದೇವಿಯ ಆರಾಧನೆ, ವಿಜಯದಶಮಿ ಹಬ್ಬದಂದು ಸಂತೆಹೊಂಡದ ಬಳಿ ಕೆಂಡೋತ್ಸವ, ಶ್ರಾವಣ, ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತ್ತಿವೆ. ದೇವಿಯ ಆಜ್ಞೆ ಮೇರೆಗೆ ಬುರುಜನಹಟ್ಟಿಯಲ್ಲಿ ಸಿಹಿನೀರುಹೊಂಡ ನಿರ್ಮಿಸಲಾಗಿದೆ.

ಹಲವು ಹೆಸರಿನಿಂದ ಆರಾಧನೆ: ರಾಜ ಉತ್ಸವಾಂಬ, ಉಚ್ಚಂಗೆಮ್ಮ, ಉಚ್ಚಂಗೇಶ್ವರಿ ಸೇರಿ ಇತರೆ ಹೆಸರುಗಳಿಂದಲೂ ಭಕ್ತರು ಪ್ರೀತಿಯಿಂದ ಕರೆಯುವುದುಂಟು. ದೇವಿಯ ದೇಗುಲ ಸಂಪೂರ್ಣ ಕಲ್ಲುಗಳಿಂದಲೇ ನಿರ್ಮಾಣವಾಗಿದ್ದು, ಹಂತ-ಹಂತವಾಗಿ ದುರ್ಗವನ್ನಾಳಿದ ಪಾಳೆಗಾರರು ಅಭಿವೃದ್ಧಿ ಪಡಿಸಿದ್ದಾರೆ. ಬಲಭಾಗದಲ್ಲಿ ಮಾತಂಗಿ ದೇವಿಯ ಗುಡಿ, ಮಹಾರಾಣಿಯ ಶಿಲ್ಪವನ್ನು ಕಾಣಬಹುದು. ಕೋಟೆ ನೋಡಲು ಬಂದವರಿಗೆ ದೇವಿ ದೇಗುಲ ಕೈ ಬೀಸಿ ಕರೆಯಲಿದೆ.