ಜಿಲ್ಲೆ

ರಾಜಭವನ ಚಲೋ 27ಕ್ಕೆ

Chitradurga - Desk - Pranav Kumar

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ, ಅಪಪ್ರಚಾರ ವಿರೋಧಿಸಿ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆ. 27 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಹಾ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಜನಪರ ಆಡಳಿತ ಸಹಿಸದೆ, ಇಲ್ಲಸಲ್ಲದ ಆರೋಪ ಮಾಡುತ್ತ ಜನಪ್ರಿಯತೆ ಕುಗ್ಗಿಸುವ ಕಾರ್ಯಕ್ಕೆ ಮೈತ್ರಿ ಪಕ್ಷದ ನಾಯಕರು ಮುಂದಾಗಿದ್ದು, ತೇಜೋವಧೆ ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಮುಡಾ ಹಗರಣ ಸಂಬಂಧ ನಡೆಸಿದ ಪಾದಯಾತ್ರೆ ಸಫಲವಾಗದಿದ್ದಾಗ ಕೇಂದ್ರದಿಂದ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ, ಕಾನೂನಾತ್ಮಕವಾಗಿ ಸಿಲುಕಿಸುವ ಕುತಂತ್ರ ರೂಪಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ದಸಂಸ ಮುಖಂಡ ದುರುಗೇಶಪ್ಪ ಮಾತನಾಡಿ, ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸಂವಿಧಾನ, ಪ್ರಜಾಪ್ರಭುತ್ವದ ಆಶಯ ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ ಅವರು, ರಾಜ್ಯದ ವಿವಿಧೆಡೆಯಿಂದ ಅನೇಕರು ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡರಾದ ಆರ್.ಕೆ.ಸರ್ದಾರ್, ನಿರಂಜನಮೂರ್ತಿ, ಎಚ್.ಮಂಜಪ್ಪ, ಪ್ರಸನ್ನಕುಮಾರ್, ಶಫಿವುಲ್ಲಾ, ಕೃಷ್ಣಪ್ಪ, ಬಿ.ಟಿ.ಜಗದೀಶ್, ಮೂರ್ತಿ, ಜಾಕಿರ್ ಹುಸೇನ್, ಮಂಜುನಾಥ್, ಪ್ರಸನ್ನ ಇತರರಿದ್ದರು.