ಜಿಲ್ಲೆ

ರಾಜಪಥದಲ್ಲಿ ವಿಜೃಂಭಿಸಿದ ದೃಶ್ಯಕಾವ್ಯ

ಮಂಜುನಾಥ ಟಿ.ಭೋವಿ ಮೈಸೂರು

ಅರಮನೆ ನಗರಿ ಮೈಸೂರಿನ ರಾಜಪಥದಲ್ಲಿ ಸಾಂಸ್ಕೃತಿಕ ಕಲೆಯ ದೃಶ್ಯಕಾವ್ಯ ವಿಜೃಂಭಿಸಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ಘಟ್ಟವಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ವಿವಿಧ ಪ್ರದರ್ಶನ ಕಲೆಗಳ ವೈಭೋಗ ಸಿರಿ ಗರಿಬಿಚ್ಚಿತು. ವಿವಿಧ ಕಲಾಸಂಸ್ಕೃತಿಯ ಸಿರಿತನದ ದಿಬ್ಬಣ ಲಕ್ಷಾಂತರ ಜನರ ಕಣ್ಣು ಕೋರೈಸಿತು.


ಕರೊನಾ ಸಂಕ್ರಮಣದಿಂದ ಕಳೆದ ಎರಡು ವರ್ಷ ಅರಮನೆಗೆ ಮಾತ್ರ ಸೀಮಿತವಾಗಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಎಂದಿನಂತೆ ಬನ್ನಿಮಂಟಪದವರೆಗೆ ವರ್ಣರಂಜಿತವಾಗಿ ನೆರವೇರಿತು. ಇದರೊಂದಿಗೆ ಹೆಜ್ಜೆ ಹಾಕಿದ ಸಾಂಸ್ಕೃತಿಕ ಕಲಾ ತಂಡಗಳ ನೃತ್ಯ, ಸಂಗೀತದ ಮನಮೋಹಕತೆಗೆ ನೆರೆದಿದ್ದ ಜನಸ್ತೋಮ ಮನಸೋತಿತು.
ನಂದಿಪೂಜೆಗೆ ಪೂಜೆ ಸಲ್ಲಿಸುತ್ತಿದ್ದಂತೆ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ಚಾಲನೆಗೊಂಡಿತು. ನಿಶಾನೆ ಆನೆ ಅರ್ಜುನ, ನೌಪತ್ ಆನೆಯಾಗಿ ಮೊದಲ ಬಾರಿಗೆ ಮಹೇಂದ್ರ, ಸಾಲಾನೆಯಾಗಿ ಭೀಮ, ವಿಜಯ, ಗೋಪಾಲಸ್ವಾಮಿ, ಗೋಪಿಯೊಂದಿಗೆ ಕಲಾತಂಡಗಳು ಹಿಮ್ಮೇಳದಂತೆ ಹೆಜ್ಜೆ ಹಾಕಿದವು. ಆಗ ಜಾನಪದ ಕಲೆಯ ದೃಶ್ಯವೈಭವ, ನೆತ್ತಿ ಸುಡುವ ಬಿಸಿಲಿನಲ್ಲೂ ಕಲಾವಿದರ ರಣ ಉತ್ಸವ, ಕರ್ನಾಟಕ ಸಾಂಸ್ಕೃತಿಕ ಕಲೆಯ ದರ್ಶನ, ಅನ್ಯ ರಾಜ್ಯಗಳ ಸಾಂಪ್ರದಾಯಿಕ ನರ್ತನ ಕಣ್ಮನ ಸೆಳೆಯಿತು.


ನಂಜನಗೂಡು ತಂಡದಿಂದ ವೀರಗಾಸೆ, ಹಾವೇರಿಯ ಪುರವಂತಿಕೆ ನೃತ್ಯದೊಂದಿಗೆ ಚಿತ್ರದುರ್ಗ, ಮಂಡ್ಯ, ಶಿರಾದ ಕಲಾತಂಡದಿಂದ ಕೊಂಬುಕಹಳೆ ಮೊಳಗಿತು. ವರುಣ ತಂಡದ ಕಂಸಾಳೆ, ಮಾಗಡಿಯ ಪಟಕುಣಿತ, ವಿಜಯಪುರದ ಕೀಲುಕುದುರೆ, ಸವಣೂರಿನ ಕೋಲಾಟ, ಅರಸೀಕೆರೆಯ ಚಿಟ್‌ಮೇಳ, ಧಾರವಾಡದ ಅಣ್ಣಿಗೇರಿಯ ವೃದ್ಧರು ನಡೆಸಿದ ಕಣಿ ವಾದನ ಸಭಿಕರನ್ನು ಕುಣಿಸಿತು.


ಬಾಗಲಕೋಟೆಯ ಹೂವಿನ ನೃತ್ಯದ ಘಮಲು, ಬೀಳಗಿ ತಾಲೂಕಿನ ಹೆಜ್ಜೆ ಮೇಳದ ಸಪ್ಪಳ, ಮೈಸೂರಿನ ತಮಟೆ ನಗಾರಿಯ ಅಬ್ಬರ, ಸ್ಥಳೀಯ ಕಲಾವಿದರ ಯಕ್ಷಗಾನ ಗೊಂಬೆಯ ಗಾಂಭೀರ್ಯ, ತಿ.ನರಸೀಪುರ ತಂಡದ ಪೂಜಾ ಕುಣಿತ, ಆಳಂದದ ಸಾಂಪ್ರದಾಯಿಕ ಲಂಬಾಣಿ ನೃತ್ಯದ ಸಿರಿ ಮೇಳೈಸಿತು.
ಚಿಕ್ಕಬಳ್ಳಾಪುರ ತಂಡದ ತಮಟೆ ವಾದನದ ಹಿನ್ನೆಲೆ ಸಂಗೀತದಲ್ಲಿ ಸಂಡೂರಿನ ತಂಡದ ಹಗಲುವೇಷದಲ್ಲಿ ಶ್ರೀರಾಮ, ಲಕ್ಷ್ಮಣ, ಹನುಮಂತನ ದರ್ಶನವಾಯಿತು. ಗೋಕಾಕ್ ತಂಡದ ದಟ್ಟಿ ಕುಣಿತದಲ್ಲಿ ಚಿತ್ರ-ವಿಚಿತ್ರ ವೇಷದಾರಿಗಳು ಮನಸ್ಸಿನಲ್ಲಿ ಭಯ ಹುಟ್ಟಿಸಿದರೆ, ಉಡುಪಿಯ ಕುಡುಬಿ ನೃತ್ಯ ಚಂದವಾಗಿತ್ತು. ಭಟ್ಕಳದ ಗೊಂಡರ ಢಕ್ಕೆ ಸೊಗಸು, ತಲಕಾಡಿನ ಚಿಲಿಪಿಲಿ ಗೊಂಬೆ ಪ್ರದರ್ಶನದ ಕಚಗುಳಿ, ಉಡುಪಿಯ ಸಿಂಗಾರ ಮೇಳ, ಪಾಂಡವಪುರದ ಮರಗಾಲು ಕುಣಿತ, ದೊಡ್ಡವರಸೆ ಸಹ ಆಕರ್ಷಿಸಿತು.
ಧಾರವಾಡದ ಜಗ್ಗಲಗಿ ಮೇಳ, ಪಾಂಡವಪುರದ ಕೀಲುಕುದುರೆ, ಬೆಂಗಳೂರಿನ ಹಾಲಕ್ಕಿ ಸುಗ್ಗಿ ಇಲ್ಲಿ ಸಂಭ್ರಮವನ್ನು ಹಿಗ್ಗಿಸಿತು. ಯಳಂದೂರಿನ ಗೇರ್ ನೃತ್ಯ, ರಾಣೇಬೆನ್ನೂರಿನ ನಂದಿಕೋಲು, ಹಿರಿಯೂರಿನ ಜಡೆ ಕೋಲಾಟ, ಕೋಲಾರದ ಕೀಲುಕುದುರೆ, ಸೋಮವಾರಪೇಟೆಯ ಮಲೆನಾಡು ಸುಗ್ಗಿ ಕುಣಿತ, ಪೊನ್ನಂಪೇಟೆಯ ಗಿರಿಜನ ನೃತ್ಯ ಜನಸಮೂಹವನ್ನು ರಂಜಿಸಿತು.


ಹಾನಗಲ್ಲನ ಬೇಡರ ವೇಷ, ಚಳ್ಳಕೆರೆಯ ಉರುಮೆ ವಾದ್ಯ, ಚಿಕ್ಕಬಳ್ಳಾಪುರದ ಕೀಲುಕುದುರೆ, ಬೆಂಗಳೂರಿನ ನವಿಲು ನೃತ್ಯ ಗರಿಬಿಚ್ಚಿಕೊಂಡು ನರ್ತಿಸಿತು. ಬಾದಾಮಿ ಕಲಾವಿದರ ಮುಳ್ಳು ಕುಣಿತ ಜನರು ಗಾಬರಿಯಿಂದ ನೋಡುವಂತೆ ಮಾಡಿತು. ಗದಗಿನ ಸಮ್ಮಾಳ ಮೇಳ, ಕೊಪ್ಪಳದ ಹಗಲುವೇಷ, ಧಾರವಾಡದ ದಾಲಪಟ, ಅಥಣಿಯ ಕರಡಿ ಮಜಲು ಮಜವಾಗಿತ್ತು.


ಮಂಡ್ಯದ ಕೋಲಾಟ, ದೊಣ್ಣೆವರಸೆ, ಮುಧೋಳದ ಝಾಂಜ್ ಪಥಕ್ ನೃತ್ಯ, ಧಾರವಾಡದ ಕಥಕಳಿ ಗೊಂಬೆ ನರ್ತನದ ಚಿನಕುರುಳಿ ಸಭಿಕರಿಗೆ ಇಷ್ಟವಾಯಿತು.
ಚಾಮರಾಜನಗರದ ಗೊರವರ ಕುಣಿತ ಮಲೆಮಹದೇಶ್ವರಸ್ವಾಮಿ ಸ್ಮರಣಿಸಿದರೆ, ಡೊಳ್ಳುಕುಣಿತ ಜನರು ಕುಳಿತಲ್ಲೇ ಹೆಜ್ಜೆ ಹಾಕಿಸಿತು. ಮೈಸೂರಿನ ಮೂಡಲಪಾಯ ಯಕ್ಷಗಾನ ನೃತ್ಯ ಮತ್ತು ಕಾರವಾರದ ಗಮಟಪಾಂಗ ಪ್ರದರ್ಶನ ಕರಾವಳಿ ಸಂಸ್ಕೃತಿಯನ್ನು ಪರಿಚಯಿಸಿದರೆ, ಹರಪನಹಳ್ಳಿಯ ನಂದಿಕೋಲು, ಬಾಗಲಕೋಟೆಯ ಚಿನ್ನಿಕೋಲು ದೇಸಿ ಸಂಸ್ಕೃತಿಯನ್ನು ತೆರೆದಿಟ್ಟಿತು. ನಂಜನಗೂಡಿನ ನಗಾರಿ ಕುಣಿತ, ವಿಜಯಪುರದ ಸುತ್ತಿಗೆ ಕುಣಿತ, ಉಡುಪಿಯ ಕಾಪು ಪ್ರದೇಶದ ಕಂಗೀಲು ನೃತ್ಯ ಅದ್ಭುತವಾಗಿ ಮೂಡಿ ಬಂತು.
ಉಡುಪಿ, ಸಾಗರ, ಶಿಕಾರಿಪುರ ತಂಡದ ಡೊಳ್ಳು ಕುಣಿತ ರೋಮಾಂಚನ ಉಂಟು ಮಾಡಿ ಜನರನ್ನು ಕುಳಿತಲ್ಲೇ ಹೆಜ್ಜೆ ಹಾಕಿಸಿತು. ಬಬಲೇಶ್ವರ ಕೀಲುಕುದುರೆ ಕಳೆಗಟ್ಟಿತು. ವರುಣ ಹೋಬಳಿ, ಪಾಂಡವಪುರ, ಸಾತನೂರು, ಶ್ರೀರಂಗಪಟ್ಟಣ ತಂಡಗಳ ಸೋಮನ ಕುಣಿತ ಸೊಗಸಾಗಿ ಕಂಗೊಳಿಸಿತು.

ಕೋಳಿಗಳ ನರ್ತನ:
ಆನೆಗಳೊಂದಿಗೆ ಬೃಹತ್ ಕೋಳಿಗಳ ದರ್ಶನವಾಯಿತು. ಕೇರಳದ ಕಾಸರಗೋಡಿನ ಆದಿಶಕ್ತಿ ಕಲಾಕ್ಷೇತ್ರದ ಕೋಳಿನೃತ್ಯ ಎಲ್ಲರ ಗಮನವನ್ನೂ ಥಟ್ಟನೆ ಸೆಳೆಯಿತು. ಕೋಳಿ ವೇಷದಾರಿಗಳು ರಾಜಬೀದಿಯಲ್ಲಿ ನೃತ್ಯ ಮಾಡುತ್ತ ಸಾಗಿ ಎಲ್ಲರನ್ನೂ ರಂಜಿಸಿದರು.

ಅನ್ಯರಾಜ್ಯಗಳ ಕಲೆಯ ದರ್ಶನ:
ಅನ್ಯ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಶ್ರೀಮಂತಿಕೆ ಕೂಡ ಅನಾವರಣಗೊಂಡಿತು. ರಾಜಸ್ಥಾನದ ಚಕ್ತಿ ಮತ್ತು ಗೂಮರ್ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ ಆಕರ್ಷಿಸಿತು. ತೆಲಂಗಾಣದ ಮಥುರಿ ನೃತ್ಯ, ಪಂಜಾಬ್‌ನ ಬಾಂಗ್ರಾ ಮತ್ತು ಜಿಂದುವಾ ನೃತ್ಯ ಬಿಂದಾಸ್ ಆಗಿತ್ತು. ಜಮ್ಮು-ಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿನ ತಪ್ಪೆಟಂ ನೃತ್ಯ ದರ್ಶನವಾಯಿತು.

ಚಿಮ್ಮಿದ ಬೆಂಕಿಯ ಜ್ವಾಲೆ:
ಮೆರವಣಿಗೆಯಲ್ಲಿ ಅಗ್ನಿಯ ಉಂಡೆಗಳು ಹೊರಚಿಮ್ಮಿದವು. ಐದಾರು ಕಲಾವಿದರು ಬಾಯಿಯಲ್ಲಿ ಸೀಮೆಎಣ್ಣೆ ತುಂಬಿಕೊಂಡು ಬೆಂಕಿಗೆ ಚಿಮುಕಿಸಿ ಆಕಾಶದಲ್ಲಿ ಜ್ವಾಲೆ ಚಿಮ್ಮುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕೆಲವರು ರೋಮಾಂಚನಗೊಂಡರೆ, ಇನ್ನೂ ಕೆಲವರು ಗಾಬರಿಗೊಂಡರು.