ಜಿಲ್ಲೆ

ರಾಜಕುಮಾರ್ ಕುರಿತ ಸಾಹಿತ್ಯ ರಚನೆಯಾಗಲಿ

ಮಂಜುನಾಥ ತಿಮ್ಮಯ್ಯ

ಮೈಸೂರು: ವರನಟ ಡಾ.ರಾಜಕುಮಾರ್ ಕುರಿತು ಸಾಹಿತ್ಯ ರಚನೆ ಮಾಡುವ ಮೂಲಕ ಅವರಿಗೆ ಶತಮಾನೋತ್ಸವ ಕೊಡುಗೆ ನೀಡಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಕದಂಬ ರಂಗವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಡಿ.ಗುರುಮೂರ್ತಿ ಹಾರೋಹಳ್ಳಿ ಅವರ ‘ಡಾ.ರಾಜಕುಮಾರ್ ದಿ ಲೆಜೆಂಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನ್ನು 4 ವರ್ಷದಲ್ಲಿ ಡಾ.ರಾಜ್‌ಕುಮಾರ್ ಅವರ ಶತಮಾನೋತ್ಸವ ಬರಲಿದ್ದು, ಅಷ್ಟರೊತ್ತಿಗೆ ಅವರ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿ ಗ್ರಂಥರೂಪದಲ್ಲಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

ಬಿಡುಗಡೆಯಾದ ಈ ಕೃತಿ ಪಿಎಚ್.ಡಿ ಸಂಶೋಧನಾ ಗ್ರಂಥವಾಗಿದೆ. ಇದು ಡಾ.ರಾಜಕುಮಾರ್ ಕುರಿತು ಹೊರ ಬಂದ ಮೊದಲ ಸಂಶೋಧನಾ ಕೃತಿಯಾಗಿದೆ ಎಂದು ಲೇಖಕರು ಹೇಳಿದ್ದಾರೆ.

ಇದು ನಿಜಕ್ಕೂ ಆಶ್ಚರ್ಯದ ಸಂಗತಿ. ಇಷ್ಟು ದಿನ ಈ ಕೆಲಸವನ್ನು ಬೇರೆಯವರು ಏಕೆ ಮಾಡಲಿಲ್ಲ? ಯಾರ‌್ಯಾರೋ ಹೆಸರಿನಲ್ಲಿ ಕೆಲಸಕ್ಕೆ ಬಾರದ ಪಿಎಚ್.ಡಿ ಮಹಾಪ್ರಬಂಧಗಳನ್ನು ರಚನೆ ಮಾಡಲಾಗಿದೆ. ಆದರೆ ಇಷ್ಟು ದಿನದವರೆಗೆ ರಾಜಕುಮಾರ್ ಕುರಿತು ಪಿಎಚ್.ಡಿ ಏಕೆ ಮಾಡಲಿಲ್ಲ ಎಂಬುದೇ ಬೇಸರ ಸಂಗತಿ ಎಂದರು.

ಜಾಗತಿಕ ಪ್ರಶಸ್ತಿಯಾದ ನೊಬೆಲ್ ಪುರಸ್ಕಾರ ಪಡೆದ ಶೇ.90ರಷ್ಟು ಸಾಧಕರು ಬಡತನ ಹಿನ್ನೆಲೆಯವರು. ತಮ್ಮ ಹಳ್ಳಿಗಾಡಿನಲ್ಲಿ ನೋವು, ಸಂಕಷ್ಟ, ಸಮಸ್ಯೆ ಎದುರಿಸಿದವರು. ಇಂತಹ ಸಾಧಕರ ಸಾಲಿಗೆ ಡಾ.ರಾಜಕುಮಾರ್ ಸಹ ಸೇರುತ್ತಾರೆ. ಅವರಂತಹ ಮತ್ತೊಬ್ಬ ರಾಜಕುಮಾರ್ ಹುಟ್ಟಲು ಸಾಧ್ಯವೇ ಇಲ್ಲ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಮಾತನಾಡಿದರು. ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜು, ರಂಗವೇದಿಕೆಯ ಅಧ್ಯಕ್ಷ ರಾಜಶೇಖರ್ ಕದಂಬ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಬಿಜೆಪಿಯ ಆರ್.ರಘು ಇದ್ದರು.