ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ದ.ರಾ. ಬೇಂದ್ರೆ ಅವರನ್ನು ನಾವೆಲ್ಲ ಜಗದ ಕವಿ, ಯುಗದ ಕವಿ ಎಂದು ಬಣ್ಣಿಸಿದ್ದರೂ ಅವರನ್ನು ಕರ್ನಾಟಕ ಅಷ್ಟು ಆತ್ಮೀಯವಾಗಿ ಒಪ್ಪಿಕೊಳ್ಳದ ಬೇಸರ ಅವರನ್ನು ಕಾಡಿತ್ತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಹೇಳಿದರು.
ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಜಿನದತ್ತ ದೇಸಾಯಿ ಹಾಗೂ ಡಾ. ರಾಜೇಂದ್ರ ಚೆನ್ನಿ ಅವರಿಗೆ ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬೇಂದ್ರೆ ಅವರನ್ನು ಕರ್ನಾಟಕ ಒಪ್ಪಿಕೊಳ್ಳದ ಕಾರಣ ಅತ್ಯಂತ ನೋವಿನಿಂದ ಧಾರವಾಡದ ಬೆಣ್ಣೆಗೆ ಧಾರಣೆ ಆಗಲಿಲ್ಲ ಎಂದಿದ್ದರು. ಸರ್ಕಾರಕ್ಕೆ ಹೃದಯ ಹಾಗೂ ಸಾಂಸ್ಕೃತಿ ಲೋಕದ ಕಾಳಜಿ ಇದ್ದರೆ ವಿಶ್ವ ಕವಿ ದಿನವನ್ನು ಒಪ್ಪಿಕೊಂಡು ಆಚರಿಸಬೇಕು ಎಂದರು.
ಎಲ್ಲ ಬಗೆಯ ಸಾಹಿತ್ಯಗಳು ನಮ್ಮಲ್ಲಿವೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ನಮಗೆ ರಾಜಕೀಯ ಸಾಹಿತ್ಯದ ಅಗತ್ಯವಿದೆ. ಇದರ ಮೂಲಕ ಜನತಂತ್ರ ವ್ಯವಸ್ಥೆ ಎಚ್ಚರಿಸುವ ಕೆಲಸವನ್ನು ಸಾಹಿತಿಗಳೂ ಮಾಡಲಿ. ಅದನ್ನು ಬಿಟ್ಟು ರಾಜಕಾರಣ ಮತ್ತು ರಾಜಕೀಯ ಸಾಹಿತ್ಯವನ್ನು ಮೈಲಿಗೆಯಿಂದ ನೋಡುವುದು ಜನತಂತ್ರ ವ್ಯವಸ್ಥೆಗೆ ಅಪಾಯಕಾರಿ ಎಂದರು.
ಇಂದು ಸ್ಥಿತಿವಂತರೂ ಮತ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ರಾಜಕಾರಣ ಹಾಗೂ ರಾಜಕಾರಣಿಗಳು ಇಂದಿನ ಜನರನ್ನು ಭ್ರಷ್ಟಗೊಳಿಸಿದೆ. ಚುನಾವಣೆಗೆ ಬೆಲೆ ಇಲ್ಲವಾಗಿದೆ. ಇಂದು ಒಂದು ಮತಕ್ಕೆ ಹಣ ಕೊಡುವ ಕಾಲ ಬಂದಿದೆ. ಆಕಾಂಕ್ಷಿಗಳು ಸಹ ಕೋಟಿಗಟ್ಟಲೆ ಹಣ ನೀಡಲು ಸಿದ್ಧರಾಗಿದ್ದಾರೆ. ಚುನಾವಣೆಗೆ ಇಷ್ಟೆಲ್ಲ ಹಣ ವ್ಯಯಿಸುವವರಿಂದ ಜನರು ಏನು ನಿರೀಕ್ಷಿಸಿಯಾರು ಎಂಬುದನ್ನೂ ಊಹಿಸಬಹುದು. ಇಂತಹ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲಾರೆ ಎಂದರು.
ಪ್ರಶಸ್ತಿಯು ತಲಾ 50 ಸಾವಿರ ರೂ. ಹಾಗೂ ಸ್ಮರಣಿಕೆ ನೀಡಲಾಯಿತು. ಡಾ. ಶಾಂತಾ ಇಮ್ರಾಪುರ, ಡಾ. ಎಂ.ಜಿ. ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಪ್ರಕಾಶ ಬಾಳಿಕಾಯಿ, ಇತರರು ಇದ್ದರು.