ಜಿಲ್ಲೆ

ರಾಜಕೀಯಕ್ಕೆ ಬಾರದಿದ್ದರೆ ಚಿತ್ರನಟರಾಗುತ್ತಿದ್ದರು ಅರಸು: ಡಾ.ಎನ್.ಆರ್.ಚಂದ್ರೇಗೌಡ

ಆರ್.ಕೃಷ್ಣ

ಮೈಸೂರು: ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲಿಯೂ ಆಸಕ್ತಿ ಹೊಂದಿದ್ದ ಡಿ.ದೇವರಾಜ ಅರಸು ಅವರು ರಾಜಕೀಯಕ್ಕೆ ಬಾರದಿದ್ದರೆ ಚಿತ್ರನಟರಾಗಿರುತ್ತಿದ್ದರು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎನ್.ಆರ್.ಚಂದ್ರೇಗೌಡ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ 108ನೇ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಎತ್ತರದ ನಿಲುವು ಹೊಂದಿದ್ದ ಡಿ.ದೇವರಾಜ ಅರಸು ಅವರಿಗೆ ಚಿತ್ರರಂಗದಲ್ಲಿಯೂ ಅವಕಾಶ ಇತ್ತು ಎಂದರು.
ಗ್ರಾಮೀಣ ಭಾಗದಲ್ಲಿಯೇ ಬೆಳೆದಿದ್ದ ಅರಸು ಅವರು, ಸಾಮಾಜಿಕ ಕಾಳಜಿ ಹೊಂದಿದ್ದರು. ಆಕರ್ಷಕವಾಗಿದ್ದ ಅವರನ್ನು ಚಿತ್ರರಂಗದಲ್ಲಿ ನಾಯಕ ನಟನಾಗಿಸುವ ಪ್ರಯತ್ನ ನಡೆದಿತ್ತು. ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲಿಯೂ ಆಸಕ್ತಿ ಇತ್ತು. ಹೀಗಾಗಿ ಅವರನ್ನು ‘ಭಕ್ತ ರಾಮದಾಸ’ ಚಿತ್ರದ ನಾಯಕ ನಟರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ವಿಧಿಯ ಆಟವೇ ಬೇರೆ ಇದ್ದುದರಿಂದ ಅವರು ರಾಜಕೀಯಕ್ಕೆ ಹೊರಳಿದ್ದರಿಂದ ಚಿತ್ರ ನಟರಾಗುವ ಆಸೆ ಕೈಗೂಡಲಿಲ್ಲ ಎಂದು ಹೇಳಿದರು.
ರಾಜಕಾರಣಿ ಎಂದರೆ ಕೇವಲ ರಾಜಕೀಯ ಮಾಡುವುದಲ್ಲ. ಅವರಲ್ಲಿಯೂ ಸಾಹಿತ್ಯಾಭಿರುಚಿ ಇರುತ್ತದೆ ಎನ್ನುವುದಕ್ಕೆ ಅರಸು ಸಾಕ್ಷಿಯಾಗಿದ್ದರು. ಬಿಡುವಿನ ವೇಳೆ ಅವರು ಯಾವುದಾದರೂ ಒಂದು ಪುಸ್ತಕ ಓದುವುದರಲ್ಲಿ ತಲ್ಲೀನರಾಗಿರುತ್ತಿದ್ದರು. ಹೀಗಾಗಿಯೇ 70ರ ದಶಕದಲ್ಲಿ ಸಾಹಿತ್ಯದ ಮೂಲಕ ಹುಟ್ಟಿಕೊಂಡ ಚಳವಳಿಗೆ ಅಭಿವ್ಯಕ್ತಿ ಸ್ವಾತಂತ್ರೃ ನೀಡಿದರು. ಸಿದ್ದಲಿಂಗಯ್ಯ ಸೇರಿದಂತೆ ಅನೇಕ ಕ್ರಾಂತಿಕಾರಿ ಸಾಹಿತಿಗಳು ನಿರ್ಭೀತಿಯಿಂದ ತಮ್ಮ ಅನಿಸಿಕೆಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಲು ಸಾಧ್ಯವಾಯಿತು ಎಂದರು.
ದೇವರಾಜ ಅವರು ಅವರು 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸದೆ ಇದ್ದಿದ್ದರೆ ಇಂದು ಹೊರ ರಾಜ್ಯದವರು ನಮ್ಮಲ್ಲಿಗೆ ಬಂದು ಬಣ್ಣ ಬಳಿಯುವ, ಕಟ್ಟಡ, ಕಬ್ಬಿಣದ ಕೆಲಸ ಮಾಡುವಂತೆ ಕರ್ನಾಟಕದವರು ಹೊರ ರಾಜ್ಯಗಳಿಗೆ ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.