ಮೈಸೂರು: ರಾಜಕೀಯ ಕ್ಷೇತ್ರದ ಸುಧಾರಣೆಗಾಗಿ ಪ್ರಜ್ಞಾವಂತರು, ವಿದ್ಯಾವಂತರು ಶಾಸನಸಭೆಯನ್ನು ಪ್ರವೇಶಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಹೇಳಿದರು.
ರಾಜ್ಯ ಪತ್ರಗಾರ ಇಲಾಖೆ ವತಿಯಿಂದ ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ’ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜ್ಞಾವಂತರು, ಯುವಜನರು ರಾಜಕೀಯ ಕ್ಷೇತ್ರ ಪ್ರವೇಶಿಸಲು ಹಿಂದೇಟು ಹಾಕಬಾರದು. ರಾಜಕಾರಣ ಹಾಳಾಗಿದೆ ಎಂದು ಎಲ್ಲರೂ ದೂರ ಸರಿದರೆ ಏನು ಮಾಡುವುದು? ಆದ್ದರಿಂದ ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು. ಶಾಸನಸಭೆಗಳನ್ನು ಪ್ರವೇಶಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಒಳ್ಳೆಯದೂ ಆಗುತ್ತಿದೆ, ಕೆಟ್ಟದ್ದೂ ಆಗುತ್ತಿದೆ. ಸರ್ಕಾರಿ ನೌಕರಿ ಪಡೆದುಕೊಂಡರೆ ಸಾಕೆಂದು ಭಾವಿಸಬಾರದು. ತಮ್ಮ ಕೆಲಸಕ್ಕಷ್ಟೆ ಸೀಮಿತವಾಗಬಾರದು. ರಾಜಕೀಯಕ್ಕೆ ಬಂದು ದೇಶ ಸೇವೆ ಮಾಡಬೇಕು ಎಂದರು.
ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಬಲಿಷ್ಠವಾಗಲ್ಲ. ಪ್ರಜ್ಞಾವಂತಿಕೆ, ವಿದ್ಯಾವಂತಿಕೆಯಿಂದ ಈ ಕೆಟ್ಟ ಪದ್ಧತಿ ದೂರವಾಗಲಿದೆ.
ಪ್ರಸಕ್ತ ಕಾಲದಲ್ಲಿ ಎಲ್ಲ ಪಕ್ಷಗಳು ಜಾತಿ ನೋಡಿಯೇ ಚುನಾವಣೆಗೆ ಟಿಕೆಟ್ ನೀಡುತ್ತಾರೆ. ಟಿಕೆಟ್ ಕೊಡುವಾಗ ಹಣ ಎಷ್ಟಿದೆ? ಎಷ್ಟು ಕೋಟಿ ಖರ್ಚು ಮಾಡಬಲ್ಲ ಎಂಬುದನ್ನೇ ಪ್ರಮುಖವಾಗಿ ಗಮನಿಸಲಾಗುತ್ತದೆ. ಎಲ್ಲ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸದನದಲ್ಲಿ ಅನೇಕ ಶಾಸಕರು ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಪ್ರಶ್ನೆ ಕೇಳುತ್ತಾರೆ, ಉತ್ತರ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಚರ್ಚೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದಿಲ್ಲ. ಈ ರೀತಿ ವರ್ತನೆಯಿಂದ ಬೇಸರವಾಗುತ್ತದೆ ಎಂದರು.
ಜೀವನದಲ್ಲಿ ಉದಾತ್ತವಾದ ಗುರಿ ಇಟ್ಟುಕೊಂಡರೆ ಅದನ್ನು ಸಾಧಿಸಬಹುದು. ಅದಕ್ಕೆ ನಾನೇ ಉದಾಹರಣೆ. ಸಾಮಾನ್ಯ ಕುಟುಂಬದಿಂದ ಬಂದು, ಖಾಸಗಿ ಶಾಲಾ ಶಿಕ್ಷಕನಾದೆ. ನಂತರ ರಾಜಕೀಯ ಪ್ರವೇಶಿಸಿ, 8 ಚುನಾವಣೆಗಳಲ್ಲಿ ಜಯಿಸಿರುವೆ. ಈಗ ಸಭಾಪತಿಯಾಗಿದ್ದೀನಿ ಎಂದು ಹೇಳಿದರು.
ಮೈಸೂರು ಮಹಾರಾಜರು ಪ್ರಜಾಪ್ರತಿನಿಧಿ ಸಭೆ ನಡೆಸುತ್ತಿದ್ದರು. ಜನರ ಅಹವಾಲು ಕೇಳುವ ಕೆಲಸ ಮಾಡಿದರು. ವಿಧಾನಪರಿಷತ್ ಪರಿಕಲ್ಪನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ ಎಂದು ಸ್ಮರಿಸಿದರು.
ವಿದ್ಯಾರ್ಥಿಗಳು ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ಶಿಸ್ತು ಎಂಬ ಎಣ್ಣೆ ಇಲ್ಲದಿದ್ದರೆ ಬದುಕಿನ ಹಣತೆ ಪ್ರಕಾಶಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುರು, ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದರು.
ಪತ್ರಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಮಾತನಾಡಿ, ಮೈಸೂರು ರಾಜ್ಯ ಸರ್ಕಾರದ ಆಡಳಿತದ 39 ಇಲಾಖೆಗಳ 2 ಲಕ್ಷಕ್ಕೂ ಹೆಚ್ಚು ಮೂಲ ದಾಖಲೆಗಳನ್ನು ಸಂರಕ್ಷಿಸಲಾಗಿದೆ. ಅವುಗಳನ್ನು ಅಧ್ಯಯನ ಅವಕಾಶ ಕಲ್ಪಿಸಿಕೊಡಲಾಗಿದೆ.
ಲಭ್ಯ ದಾಖಲೆಗಳ ಡಿಜಿಟಲೀಕರಣವೂ ನಡೆಯುತ್ತಿದೆ. ಸದ್ಯ 1.08 ಕೋಟಿ ಪುಟಗಳಷ್ಟು ಮಾಹಿತಿ ಇಲಾಖೆಯ ಜಾಲತಾಣದಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಿಂದ ಪ್ರಬಂಧಗಳ ಮಂಡನೆ ನಡೆಯಿತು. ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಎಂ.ಪ್ರಭು ಪಾಲ್ಗೊಂಡಿದ್ದರು.