ಹಾಸನ: ರಾಜಕೀಯಕ್ಕಾಗಿ ಬಿಜೆಪಿಯವರು ವಕ್ಫ್ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ಜನ ಕಲ್ಯಾಣ ಸಮಾವೇಶದಲ್ಲಿ ಭಾಗಿಯಾಗುವ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2014 ರಲ್ಲಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರು. ಮುಸ್ಲಿಂ ಧರ್ಮ ಗುರುಗಳ ಜತೆ ಮಾತನಾಡುತ್ತೇವೆ. ಯಾರೆಲ್ಲಾ ಅತಿಕ್ರಮಣ ಮಾಡಿದ್ದಾರೋ ಅದೆಲ್ಲವನ್ನೂ ತೆರವು ಗೊಳಿಸುತ್ತೇವೆ ಎಂದಿದ್ದರು. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಸಹ ಅದನ್ನೇ ಹೇಳಿದ್ದರು. ನಮಗಿಂತ ಹೆಚ್ಚು ನೋಟಿಸ್ ಕೊಟ್ಟಿರುವುದು ಅವರೇ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿಲ್ಲ. ಅದರ ಬಗ್ಗೆ ಈಗ ಏನನ್ನೂ ಮಾತನಾಡುತ್ತಿಲ್ಲ. ಆದರೀಗ ನಮ್ಮ ವಿರುದ್ಧ ಹೋರಾಟದ ನಾಟಕ ಆಡುತ್ತಿದ್ದಾರೆ. ಇದು ರಾಜಕೀಯ ಇಬ್ಬಂದಿತನ ಎಂದು ವಾಗ್ದಾಳಿ ನಡೆದಿರು.
ಇನ್ನೇನು ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಅಲ್ಲಿ ಮಾತನಾಡಲು ಅವರಿಗೆ ವಿಷಯಗಳಿಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನಾವು ಮೂರೂ ಕ್ಷೇತ್ರಗಳನ್ನೂ ಗೆದ್ದಿದ್ದೇವೆ. 25 ವರ್ಷಗಳ ನಂತರ ಶಿಗ್ಗಾಂವಿಯಲ್ಲಿ ಜಯ ಸಾಧಿಸಿದ್ದೇವೆ. ಚನ್ನಪಟ್ಟಣದಲ್ಲೂ ಗೆದ್ದಿದ್ದೇವೆ. ಅವರು ಮೊದಲು ಗೆದ್ದಿದ್ದ ಎರಡು ಸ್ಥಾನಗಳನ್ನು ನಾವು ಪಡೆದುಕೊಂಡಿದ್ದೇವೆ. ಇದು ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ರಾಜಕೀಯ ನಾಟಕ ಶುರು ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಹೈಕೋರ್ಟ್‌ನಲ್ಲಿ ಇಂದು ನಡೆದ ತಮ್ಮ ಮೇಲ್ಮನವಿ ಅರ್ಜಿ ವಿಚಾರಣೆ ಸಂಬಂಧ ಕೇಳಿದ ಪ್ರಶ್ನೆಗೆ ಏನು ನಡೆದಿದೆ ಗೊತ್ತಿಲ್ಲ. ನಮ್ಮ ವಕೀಲರನ್ನು ಕೇಳಬೇಕು. ಕೋರ್ಟ್ ವಿಚಾರಗಳನ್ನು ಇಲ್ಲಿ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.