ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಹೊರವಲಯದಲ್ಲಿ ಯುಗಾದಿ ಪಾಡ್ಯದಂದು ಮಣ್ಣಿನಿಂದ ಮಾಡಿದ ಜಕನೇರಕಟ್ಟೆಗೆ ಪೂಜೆ ಸಲ್ಲಿಸುತ್ತಿರುವ ರೈತರು. 
ಜಿಲ್ಲೆ

ರಾಜಕೀಯ ವ್ಯಕ್ತಿಗಳಿಗೆ ಕಾದಿದೆಯಂತೆ ಕಂಟಕ...!!!

ಬಾಗಲಕೋಟೆ: ವಿಶ್ವದ ಉತ್ತರ ಮತ್ತು ಮಧ್ಯಭಾಗದಲ್ಲಿ ಭೂಕಂಪ ಆಗಲಿದ್ದು, ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದ್ದು, ರಾಜಕೀಯ ಸರಿ ಇಲ್ಲ ಎಂದು ಭಾನುವಾರ ಯುಗಾದಿ ಪಾಡ್ಯದ ಅಂಗವಾಗಿ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಜಕನೇರಕಟ್ಟಿಯ ಭವಿಷ್ಯ ಹೊರಬಿದ್ದಿದೆ.

ಆಧನಿಕ ಕೃಷಿಯಿಂದ ರೈತ ಸ್ಥಬ್ಧನಾಗಿದ್ದು, ಆರಾಮವಾಗಿದ್ದಾನೆ. ನೇಕಾರರು ಸಹ ಸ್ಥಿರವಾಗಿದ್ದು, ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಬೀಳಗಿ ಪಟ್ಟಣದ ಹೊರವಲಯದಲ್ಲಿ ಮಣ್ಣಿನಿಂದ ಒಂದು ಕಟ್ಟೆಯನ್ನು ಕಟ್ಟುತ್ತಾರೆ. ಇದಕ್ಕೆ ಜಕನೇರಕಟ್ಟಿ ಎಂದು ಕರೆಯುತ್ತಾರೆ. ಕಟ್ಟೆಯ ಮೇಲೆ ಮಣ್ಣಿನ ಬಸವಣ್ಣನ ಮೂರ್ತಿ ಇಟ್ಟು, ಅದರ ಮುಂದೆ ಬಿಂದಿಗೆಯಲ್ಲಿ ನೀರು ಸಂಗ್ರಹಿಸುತ್ತಾರೆ. ಎಕ್ಕೆ ಗಿಡದ ಎಲೆಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಜಕನೇರಕಟ್ಟೆ ಕೆಳಗೆ ಎತ್ತಿನ ಬಂಡಿ ಮಾಡಿ ಪೂಜೆ ಸಲ್ಲಿಸುತ್ತಾರೆ. ಕಟ್ಟೆ ಮುಂದೆ ಮಣ್ಣಿನಿಂದ ಎತ್ತು, ಕೂರಿಗೆ, ರೈತನ ಮೂರ್ತಿ ಮಾಡಿ ಬಿತ್ತನೆ ಮಾಡುವ ದೃಶ್ಯವನ್ನು ರಚನೆ ಮಾಡುತ್ತಾರೆ. ನೇಕಾರನ ಮಗ್ಗ, ವ್ಯಾಪಾರಿಯ ತಕ್ಕಡಿ, ಊರ ಅಗಸಿಬಾಗಿಲು ನಿರ್ಮಾಣ ಮಾಡುತ್ತಾರೆ. ರಾತ್ರಿಯಿಂದ ಬೆಳಗಿನ ವರೆಗೂ ಯಾರೂ ಆ ಸ್ಥಳದಲ್ಲಿ ಇರುವುದಿಲ್ಲ.

ಯುಗಾದಿ ಪಾಡ್ಯದ ದಿನ ಬೆಳಗ್ಗೆ ರೈತರು ಸೇರಿದಂತೆ ಸಾಕಷ್ಟು ಜನರು ಅಲ್ಲಿ ಸೇರುತ್ತಾರೆ. ಕಟ್ಟೆಯ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆಯೋ ಆ ಭಾಗದಲ್ಲಿ ಭೂಕಂಪವಾಗುತ್ತದೆ ಎನ್ನುವ ನಂಬಿಕೆ.

ಈ ಸಲ ಯುಗಾದಿ ಪಾಡ್ಯದ ದಿನ ಕಟ್ಟೆಯ ಉತ್ತರ ಮತ್ತು ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿAದ ವಿಶ್ವದ ಉತ್ತರ ಮತ್ತು ಮಧ್ಯಭಾಗದಲ್ಲಿ ಭೂಕಂಪವಾಗಲಿದೆ ಎನ್ನುವ ಭವಿಷ್ಯವನ್ನು ಹೊರಹಾಕಿದರು. ದಕ್ಷಿಣ ಭಾಗದಲ್ಲಿ ಆಹಾರ ಉಂಡೆಗಳು ಖಾಲಿಯಾಗಿದ್ದರೆ, ಉತ್ತರ ಭಾಗದಲ್ಲಿ ಆಹಾರ ಧಾನ್ಯಗಳು ಖಾಲಿಯಾಗಿಲ್ಲ. ಇದರಿಂದ ಉತ್ತರ ಭಾಗದಲ್ಲಿ ಜನಪೀಡೆಯಿದೆ ಎಂದು ಹೇಳಿದರು.

ಬಸವಣ್ಣನ ಮುಂದಿನ ನೀರಿನ ಮಡಿಕೆಯಲ್ಲಿ ಅರ್ಧ ಭಾಗ ಮಡಿಕೆ ಖಾಲಿ ಆಗಿದ್ದು, ಇದರಿಂದ ಮಳೆ ಸಮೃದ್ಧಿ ಆಗಲಿದ್ದು, ಖರ್ಚು ಸಹ ಹೆಚ್ಚಾಗಲಿದೆಯಂತೆ. ತಕ್ಕಡಿ ಬಿದ್ದು ಹೋಗಿದ್ದರಿಂದ ಈ ಸಲ ವ್ಯಾಪಾರ ವಹಿವಾಟು ಕುಸಿಯುವ ಲಕ್ಷಣವಂತೆ. ಅಗಸಿಬಾಗಿಲು ಬಿದ್ದು ಹೋಗಿದ್ದರಿಂದ ಮುಂಬರುವ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದೆ ಎಂದು ಭವಿಷಯ ನುಡಿದರು.