ಜಿಲ್ಲೆ

ರಾಜಕೀಯ ಲಾಭಕ್ಕೆ ಮಹಿಳಾ ಮೀಸಲಾತಿ

ಶ್ರೀರಂಗಪಟ್ಟಣ: ಮುಂಬರುವ 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಕೇಂದ್ರ ಸರ್ಕಾರ ಶೇ.33 ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದೆ. ಇದು ಮಹಿಳೆಯರ ಮತ ಕೇಂದ್ರೀಕರಿಸುವ ತಂತ್ರ ಎಂದು ಅಖಿಲ ಭಾರತ ಜನವಾದಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಆರೋಪಿಸಿದರು.


ಪಟ್ಟಣದ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಶನಿವಾರ ಕಾರ್ಯಕರ್ತರೊಂದಿಗೆ ಸೆ.25ರಂದು ಮಂಡ್ಯದಲ್ಲಿ ಸಂಘಟನೆ ಹಮ್ಮಿಕೊಂಡಿರುವ ಮಹಿಳೆಯರ ಟ್ರಾೃಕ್ಟರ್ ಮತ್ತು ಬೈಕ್ ರ‌್ಯಾಲಿಯಲ್ಲಿ ಭಾಗಿಯಾಗುವಂತೆ ಕರಪತ್ರಗಳನ್ನು ಹಂಚಿದ ಬಳಿಕ ಮಾತನಾಡಿದರು. ಅಕ್ಟೋಬರ್ 5ರಂದು ಜನವಾದಿ ಮಹಿಳಾ ಸಂಘಟನೆ ವತಿಯಿಂದ ಬೆಲೆ ಏರಿಕೆ, ನಿರುದ್ಯೋಗ, ಬಡತನ ನಿರ್ಮೂಲನೆ, ಕೋಮುವಾದ ಮುಕ್ತ ಭಾರತ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರ ಭಾಗವಾಗಿ ಸೆ.25ರಂದು ಮಂಡ್ಯದಲ್ಲೂ ಸಾಂಕೇತಿಕ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.


ಕೇಂದ್ರ ಸರ್ಕಾರ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿರುವುದು ಸ್ವಾಗತರ್ಹ. ಆದರೆ, ಇದರಲ್ಲಿ ರಾಜಕೀಯ ಲಾಭದ ಕುತಂತ್ರವಿದ್ದು, ಮಹಿಳೆಯರ ರಾಜಕೀಯ ಪಾಲುಗಾರಿಕೆಯ ಇಚ್ಛೆ ಬಿಜೆಪಿಗೆ ಇಲ್ಲ. ಕೇಂದ್ರ ಸರ್ಕಾರ ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದೆ. ಆಸೀಫಾಳ ಮೇಲೆ ನಡೆದ ಅತ್ಯಾಚಾರವನ್ನು ನಿರ್ಲಕ್ಷಿಸಿದೆ. ಮಣಿಪುರದಲ್ಲಿ ಜನಾಂಗೀಯ ದಾಳಿ, ರೈತರನ್ನು ಖಲಿಸ್ಥಾನಿ ಎಂದು ಜರಿದಿದ್ದು ಸೇರಿದಂತೆ ಹಲವು ವೈಫಲ್ಯಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಳಗೊಂಡಿದೆ. ಇವೆಲ್ಲವುದರ ನಿರ್ಮೂಲನೆಗೊಳಿಸಿ ಮಾನವತವಾದಿ ಸರ್ಕಾರ ಜಾರಿ ನಮ್ಮ ಗುರಿಯಾಗಬೇಕು ಎಂದರು.


ತಾಲೂಕು ಅಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಪ್ರಭಾ ಎಂ.ಕೆ.ಖಜಾಂಚಿ ಬೃಂದಾಮಣಿ, ಸಾಮಾಜಿಕ ಹೋರಾಟಗಾರರಾದ ಪ್ರಿಯಾ ರಮೇಶ್, ಅಮ್ರೀನ್ ತಾಜ್, ಪ್ರೇಮಾ ಉಪಸ್ಥಿತರಿದ್ದರು.