ಜಿಲ್ಲೆ

ರಾಜಕೀಯ ಭಿಕ್ಷೆ ಬೇಡಲು ನಾನು ಯಾರ ಮನೆಗೂ ಹೋಗಿಲ್ಲ:ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು

ಹಾಸನ: ಕಾಂಗ್ರೆಸ್ ಮುಖಂಡರು ಮೈಕ್ ಇದೆಯೆಂದು ಭಾಷಣ ಮಾಡಬಾರದು. ನಮಗೂ ಭಾಷಣ ಮಾಡಲು ಬರುತ್ತದೆ. ತಮ್ಮದು ಎಷ್ಟಿದೆಯೋ ಅಷ್ಟನ್ನು ನೋಡಿಕೊಂಡು ಸುಮ್ಮನಿದ್ದರೆ ಸರಿ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು.

ಪ್ರಜ್ವಲ್ ರೇವಣ್ಣ ಬೆಗ್ಗಿಂಗ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಗುರುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜಕೀಯ ಭಿಕ್ಷೆ ಬೇಡಲು ನಾನು ಯಾರ ಮನೆಗೂ ಹೋಗಿಲ್ಲ. ಈ ಹಿಂದೆ ಶಿವಲಿಂಗೇಗೌಡರು ನಮ್ಮ ಪಕ್ಷದಲ್ಲಿ ನಿಂತಿದ್ದಾಗ ನಮ್ಮನ್ನೆಲ್ಲ ಬೇಡಿಕೊಳ್ಳುತ್ತಿರಲಿವೇ? ಇವತ್ತು ಯಾರ ಮನೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ? ಚುನಾವಣೆಗಿಂತ ಮುಂಚೆ ಯಾರನ್ನು ಬೇಡಿಕೊಂಡಿದ್ದರು ಎಂದು ಪ್ರಶ್ನಿಸಿದರು.

ಬೇರೆಯವರಿಗೆ ಒಂದು ಬೆರಳು ತೋರಿಸಿದರೆ, ಉಳಿದ ಬೆರಳುಗಳು ನಮನ್ನೇ ತೋರಿಸುತ್ತವೆ. ಬೆರಳು ತೋರಿಸುವ ಆಟ ಬೇಡ. ಈಗ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಗಮನಿಸಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಶಾಸಕರಾಗುತ್ತಿರಲಿಲ್ಲ. ಆ ಋಣ ಇಟ್ಟುಕೊಂಡು ಮಾತನಾಡಲಿ. ಈಗ ಕಾಂಗ್ರೆಸ್‌ಗೆ ಹೋಗಿದ್ದೀನೆ ಎಂದು ನಮ್ಮನ್ನು ಬೈದರೆ ಕಾಂಗ್ರೆಸ್ ಹೈಕಮಾಂಡ್ ಕೆಲಸ ಮಾಡಿಕೊಡುತ್ತದೆ ಎಂಬ ಭ್ರಮೆ ಇದ್ದರೆ ಅದನ್ನು ಬಿಡಲಿ ಎಂದು ಶಿವಲಿಂಗೇಗೌಡರಿಗೆ ಟಾಂಗ್ ನೀಡಿದರು.

ಮೊದಲು ಸಾರ್ವಜನಿಕರ ಬಗ್ಗೆ ಸಮಸ್ಯೆ ಆಲಿಸಲಿ. ಹಾಸನದಲ್ಲಿ ಕುಳಿತುಕೊಂಡು ಲೂಟಿ ಹೊಡೆಯುವುದಲ್ಲ. ನಾಲ್ಕು ತಿಂಗಳಿನಿಂದ ಎಷ್ಟು ಅನುದಾನ ತಂದಿದ್ದಾರೆ? ಯಾವ ಯೋಜನೆ ತಂದಿದ್ದಾರೆ? ಅರಸೀಕೆರೆ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಅವರು ಸಭೆ ಮಾಡಿಕೊಂಡರೆ ಕಾಂಗ್ರೆಸ್ ಬಗ್ಗೆ ಮಾತನಾಡಲಿ, ನಮ್ಮ ಬಗ್ಗೆ ಅಲ್ಲ. ಇದೇ ಶಿವಲಿಂಗೇಗೌಡರು ಒಂದು ವರ್ಷದ ಹಿಂದೆ ಕಾಂಗ್ರೆಸ್‌ನವರನ್ನು ಬೈಯುತ್ತಿದ್ದರು. ಅವರ ಹಾಗೆ ನಮಗೆ ಬಣ್ಣ ಬದಲಾಯಿಸಲು ಬರುವುದಿಲ್ಲ. ಸಮಯಕ್ಕೆ, ಸ್ವಾರ್ಥಕ್ಕೆ ತಕ್ಕಂತೆ ಅವರ ಅನುಕೂಲಕ್ಕೆ ಬಣ್ಣ ಬದಲಾಯಿಸುವ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ಜಿಲ್ಲೆಯ 357 ಗ್ರಾಮ ಪಂಚಾಯಿತಿಗಳ ಪೈಕಿ 197 ಪಂಚಾಯಿತಿಗಳಿಗೆ ಭೇಟಿ ನೀಡಿದೇನೆ. ಯಾವ ಲೋಕಸಭೆ ಸದಸ್ಯ ಇಷ್ಟು ಪಂಚಾಯಿತಿಗಳಿಗೆ ಹೋಗಿದ್ದಾರೆ ತಿಳಿದುಕೊಂಡು ಮಾತನಾಡಲಿ. ನಾನು ಕಾನೂನು ಪ್ರಕಾರ ಸಭೆ ಮಾಡುತ್ತಿದ್ದೇನೆ. ನನಗೆ ಸಭೆ ನಡೆಸುವ ಅಧಿಕಾರ ಇಲ್ಲ ಎಂದು ಯಾರು ಹೇಳಿದ್ದು? ಅವರಿಗೆ ಕಾನೂನು ಗೊತ್ತಿದೆಯಾ ಎಂದು ಮೊದಲು ಕೇಳಿ. ನಾನು ಸಾರ್ವಜನಿಕರ ಕೆಲಸ ಮಾಡಲು ಹೋಗಿದೇನೆ. ಇವರು ಎಂಎಲ್‌ಸಿ ಆದಾಗ ಎಷ್ಟು ತಾಲೂಕಿಗೆ ಹೋಗಿದ್ದರು? ಚನ್ನರಾಯಪಟ್ಟಣದಿಂದ ಆಚೆ ಬರಲಿಲ್ಲ. ನಾನು ಸಭೆ ನಡೆಸಲು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಣ ನೀಡಿದ್ದಾರೆಯೇ? ಆ ಭಾಗದ ಜನರು, ಕಾರ್ಯಕರ್ತರು ಹಣ ಹಾಕಿಕೊಂಡು ಸಭೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರಿಗೂ ತಿರುಗೇಟು ನೀಡಿದರು.

ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿಲ್ಲ

ನಾಲ್ಕು ತಿಂಗಳಿನಿಂದ ಈ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಶೇ.20, 30 ಜನರಿಗೆ ಮಾತ್ರ ಸಿಗುತ್ತಿದೆ. ಶೇ.70ರಷ್ಟು ಜನರಿಗೆ ಸೌಲಭ್ಯ ಸಿಗುತ್ತಿಲ್ಲ. ಈ ಹಿಂದೆ 200, 300ರೂ. ಬರುತ್ತಿದ್ದ ವಿದ್ಯುತ್ ಶುಲ್ಕ ಈಗ 1200, 1300, 2000 ರೂ. ಬರುತ್ತಿದೆ. ಹೆಣ್ಣುಮಕ್ಕಳಿಗೆ 2000 ರೂ. ನೀಡುತ್ತೇವೆ ಎಂದು ಹೇಳಿ ಕೇವಲ ಶೇ.20ರಷ್ಟು ಮಂದಿಗೆ ಮಾತ್ರ ಹಣ ನೀಡುತ್ತಿದ್ದಾರೆ. ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿ, ಈಗ ಕೇಂದ್ರ ಸರ್ಕಾರ ಅಕ್ಕಿಗೆ ಕಡಿವಾಣ ಹಾಕಿದೆ ಎಂದು ಗೂಬೆ ಕೂರಿಸಿ, ಮೂರು ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡುತ್ತಿದ್ದಾರೆ. ಆ ಎರಡು ಕೆ.ಜಿ ರಾಗಿಯಲ್ಲಿ ಒಂದು ಕೆ.ಜಿ. ಮಣ್ಣೇ ಇರುತ್ತದೆ. ಸಾರ್ವಜನಿಕರಿಗೆ ಏನು ತೊಂದರೆಯಾಗುತ್ತಿದೆ ಎಂಬುದರ ಬಗ್ಗೆ ಚರ್ಚೆ ಮಾಡದೆ, ಸಂಸದ ಏನು ಮಾಡುತ್ತಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರೆ. ಸಾರ್ವಜನಿಕ ಮತ ಹಾಕುವ ಸಂದರ್ಭದಲ್ಲಿ ಅಳೆದು ತೂಗಿ ಮತ ಹಾಕುತ್ತಾರೆ. ನನ್ನ ಬಗ್ಗೆ ಚರ್ಚೆ ಮಾಡಲು ಇವರು ಯಾರು ಇವರು ನ್ಯಾಯಾಧೀಶರಾ? ನಾನು ಬೇಕೋ, ಬೇಡವೋ ಎಂದು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.

ತುಂಬು ಹೃದಯದಿಂದ ಸ್ವಾಗತಿಸುತ್ತೇನೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಸ್ವಾಗತಿಸುತ್ತೇನೆ. ನಾನೇ ಮುಂದೆ ನಿಂತು ಪ್ರಚಾರ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ಅವರು ಸೋತ ವೇಳೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದಾಗ ಬೈದು ಕಳುಹಿಸಿದರು. ಅವರೆ ನನಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಈಗ ಅವರು ಬರುತ್ತಾರೆ ಎಂದರೆ ನಾನೇ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.