ಹಾಸನ:ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ರ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲಾ ಮಾನ್ಯತೆ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ರಮೇಶ್ ಅವರು ಕರಡು ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1968 ಮತಗಟ್ಟೆಗಳಿಗೆ, ಆಯೋಗವು ಅನುಮತಿ ನೀಡಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 15,35,335 ಮತದಾರಿದ್ದು ಈ ಪೈಕಿ 7,62,777 ಪುರುಷರು, 7,72,521 ಮಹಿಳೆಯರು ಹಾಗೂ 31 ಇತರೆ ಮತದಾರರಿದ್ದಾರೆ.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಕರಡು ಮತದಾರರ ಪಟ್ಟಿ ಪ್ರಕಟಣೆಗೊಂಡ ನಂತರ ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣಿಯನ್ನು ಸಲ್ಲಿಸಲು ಅ.29ರಿಂದ ನ.28ರವರೆಗೆ ಕಾಲಾವಕಾಶವಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿ. 24ರೊಳಗಾಗಿ ತೀರುವಳಿಗೊಳಿಸಬೇಕಾಗಿರುತ್ತದೆ ಎಂದು ಹೇಳಿದರು.
ಹಕ್ಕು ಮತ್ತು ಆಕ್ಷೇಪಣಿಯನ್ನು ಜಿಲ್ಲಾ ಎಲ್ಲಾ ಮತಗಟ್ಟೆಗಳಲ್ಲಿ ಆಯಾ ಮತಗಟ್ಟೆ ಹಂತದ ಅಧಿಕಾರಿಗಳು ಹಾಜರಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಜ.06ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಚುನಾವಣೆ ತಹಶೀಲ್ದಾರ್ ಎಸ್ ಕುಂಬಾರ,ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.