ಶಿಕಾರಿಪುರ: ನಾನು ರಾಜಕೀಯದಿಂದ ನಿವೃತ್ತಿ ಪಡೆದಿಲ್ಲ. ಕೇವಲ ಚುನಾವಣಾ ಸ್ಪರ್ಧಾ ರಾಜಕಾರಣದಿಂದ ದೂರ ಇದ್ದೇನೆ. ನಾವೆಲ್ಲರೂ ಒಂದಾಗಿ ಒಟ್ಟಾಗಿ ಸರ್ವತೋಮುಖ ಅಭಿವೃದ್ಧಿಯ ನಾಡನ್ನು ಕಟ್ಟಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಜಂಗಮ ಜನಕಲ್ಯಾಣ ಅಭಿವೃದ್ಧಿ ಟ್ರಸ್ಟ್ನ ವಾರ್ಷಿಕ ಮಹಾಸಭೆ, ಜಂಗಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ನನಗೆ ರಾಜಕೀಯ ಪುನರ್ಜನ್ಮ ನೀಡಿದ ಶಿಕಾರಿಪುರ ತಾಲೂಕಿನ ಜನತೆ ನನಗೆ ಭೀಮಬಲ ತುಂಬಿದ್ದಾರೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದ ತೃಪ್ತಿ ನನಗಿದೆ. ನನ್ನ ಪ್ರತಿ ಹೆಜ್ಜೆಗಳಲ್ಲಿಯೂ ನನ್ನ ಜತೆಗೆ ನಿಂತವರು ದೇವದುರ್ಲಭವಾದ ಮಹಾಜನತೆ ಎಂದರು.
ವಿಶ್ವಗುರು ಬಸವೇಶ್ವರರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ನಾನು ಅಧಿಕಾರದಲ್ಲಿದ್ದಾಗ ಯಾವುದೇ ಜಾತಿ ಮತ ಪಂಥ ಧರ್ಮಗಳೆನ್ನದೆ ಅನುದಾನ ನೀಡಿದೆ. ನನಗೆ ಗುರುಗಳ ಆಶೀರ್ವಾದ ಮತ್ತು ಮಹಾಜನತೆಯ ಆಶೀರ್ವಾದ ಫಲದಿಂದ ಅಧಿಕಾರ ಸಿಕ್ಕಿತ್ತು. ನಾನು ಪ್ರಾಮಾಣಿಕವಾಗಿ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನನ್ನ ಆಶಯದಂತೆ ಇಡೀ ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ. ಕೇವಲ ಅಭಿವೃದ್ಧಿ ನನ್ನ ಮಂತ್ರವಾಗಿತ್ತು ಎಂದು ಹೇಳಿದರು.
ಜಗದ ಹಿತ ಬಯಸುವ ಸಮಾಜವೇ ಜಂಗಮ ಸಮಾಜ. ಸದಾ ಸಂಚರಿಸುತ್ತ ಜ್ಞಾನ ಹಂಚುವ, ಸದ್ವಿಚಾರಗಳ ಸುಗಂಧ ಬೀರುವ ಶ್ರೇಷ್ಠ ಸಮಾಜ. ಇದೊಂದು ಸನಾತನವಾದ ಪರಂಪರೆ ಉಳಿಸಿ ಬೆಳೆಸುವ ಮತ್ತು ಸಮಾಜದ ಒಳಿತಿಗಾಗಿ, ತಮ್ಮನ್ನು ಸಮರ್ಪಣೆ ಮಾಡಿಕೊಂಡ ಕಾಯಕಜೀವಿ ಸಮಾಜವಾಗಿದೆ. ಜಂಗಮ ಜೋಳಿಗೆಯೆಂದರೆ ಅಧ್ಯಾತ್ಮದ ಬುತ್ತಿ ಹಂಚುವ ದೈವತ್ವದ ಜೋಳಿಗೆ, ಜಂಗಮರು ಅರಿವು ಮೂಡಿಸುವ ಗುರುಗಳು. ಜಗದೋದ್ಧಾರವೇ ಅವರ ಪರಮ ಗುರಿ. ಜೀವನಪೂರ್ತಿ ಸಮಾಜದ ಹಿತಕ್ಕಾಗಿಯೇ ಹೆಜ್ಜೆ ಹಾಕುವ ಈ ಸಮಾಜ ಇನ್ನಷ್ಟು ಸದೃಢವಾಗಬೇಕು ಎಂದರು.
ಯಾವತ್ತೂ ಸಮಾಜವನ್ನು ಉದ್ಧಾರದ ಹೆದ್ದಾರಿಯಲ್ಲಿ ನಡೆಯುವಂತೆ ಮಾಡುವ ಈ ಸಮಾಜ ವೈದಿಕ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಧಾರ್ಮಿಕ ಚಿಂತನೆಗಳನ್ನು ಹರಡುತ್ತಿರುವ ಸಮುದಾಯ. ಸಮಾಜಕ್ಕಾಗಿ ಸಂಚಾರ ಮಾಡುತ್ತಿರುವ ದೈವಾಂಶ ಸಂಭೂತರು. ಅವರ ಆಶಯಗಳು ಅವರಿಗಾಗಿ ಅಲ್ಲ, ಸಮಾಜಕ್ಕಾಗಿ. ಆದ್ದರಿಂದ ಸಮಾಜ ಅವರನ್ನು ಇಂದಿಗೂ ಗುರುಸ್ಥಾನದಲ್ಲಿಟ್ಟಿದೆ. ಈ ಸಮಾಜ ಇಂದಿಗೂ ಆ ಗುರು ಸ್ಥಾನಕ್ಕೆ ಚ್ಯುತಿಬಾರದಂತೆ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಶ್ರೀ ಗುರುಲಿಂಗ ಜಂಗಮ ಸ್ವಾಮೀಜಿ, ದಿಂಡದಹಳ್ಳಿ ಶ್ರೀ ಪಶುಪತಿನಾಥ ಶಿವಾಚಾರ್ಯ ಸ್ವಾಮೀಜಿ, ಶಿರಾಳಕೊಪ್ಪದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಸುರಗಿಹಳ್ಳಿ ಶ್ರೀ ಮಹಾಂತ ಸ್ವಾಮೀಜಿ, ಕಡೇನಂದಿಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.