ಜಿಲ್ಲೆ

ರಾಜಕೀಯ ನಾಯಕರಿಂದ ಸಾಂತ್ವನ

ಪ್ರಸಿನ್ ಕೆ.ಆರ್

ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭ ಸಂಭವಿಸಿದ ದುರಂತದಲ್ಲಿ 10 ಜನರು ಸಾವಿಗೀಡಾಗಿದ್ದು, 25 ಜನರು ಹಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಶ್ರೇಯಶ್ ಪಟೇಲ್, ಡಿಸಿ ಲತಾ ಕುಮಾರಿ, ಎಸ್ಪಿ ಮಹಮ್ಮದ್ ಸುಜಿತಾ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಜಿಲ್ಲಾಸ್ಪತ್ರೆಗೆ ಬೆಳಗ್ಗೆ ಮಧ್ಯರಾತ್ರಿ ಜೆಡಿಎಸ್‌ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಳಗ್ಗೆ ಎಂಎಲ್ಸಿ ಸಿ.ಟಿ.ರವಿ, ಆರ್.ಅಶೋಕ್, ಕೃಷ್ಣಬೈರೇಗೌಡ, ಸಂಜೆ ವೇಳೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇನ್ನಿತರರು ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಘಟನಾ ಸ್ಥಳಕ್ಕೆ ತೆರಳಿದ್ದ ಸಂದರ್ಭ ಗ್ರಾಮಸ್ಥರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದರು.

ಘಟನೆಯಲ್ಲಿ ಬಡವರು ಪ್ರಾಣಕಳೆದುಕೊಂಡಿದ್ದಾರೆ. ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದೀರ. 5 ಲಕ್ಷ ಆದರೆ ನಾವೇ ಚಂದ ಎತ್ತಿ ಕೊಡುತ್ತೇವೆ. ವಿಮಾನ ದುರಂತವಾದರೆ 25 ಲಕ್ಷ ಪರಿಹಾರ ನೀಡುತ್ತೀರಿ. ಬಡವರಾದರೆ 5 ಲಕ್ಷ ಪರಿಹಾರ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುರ್ತು ನೆರವು ನೀಡಿದ್ದೇವೆ: ಹಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಗಣಪತಿ ವಿಸರ್ಜನೆ ವೇಳೆ ಘೋರ ದುರಂತ ನಡೆದುಹೋಗಿದೆ.

ಸರ್ಕಾರ ಪರವಾಗಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತಪಟ್ಟ ಕುಟುಂಬದವರಿಗೆ ಹಾಗೂ ಗಾಯಾಳುಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೇವೆ. ಸರ್ಕಾರದವತಿಯಿಂದ 5 ಲಕ್ಷ ಪರಿಹಾರ ಘೋಷಣೆಮಾಡಲಾಗಿದೆ. ಅಲ್ಲದೆ, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಅವಘಡಕ್ಕೆ ಕಾರಣ ಏನೆಂಬುದನ್ನು ವೈಜ್ಞಾನಿಕವಾಗಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರ ವೈಫಲ್ಯ ಇದೆಯೇ ಎಂಬುದರ ಕುರಿತು ಕೂಡ ತನಿಖೆಕೈಗೊಳ್ಳಲಾಗುವುದು ಈ ಬಗ್ಗೆ ಐಜಿ ಅವರ ಜತೆ ಚರ್ಚಿಸಲಾಗಿದೆ. ಚಾಲಕಕೂಡ ತೀವ್ರತರದಲ್ಲಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಲಕ ಮಾದಕ ಪದಾರ್ಥ ಸೇವಿಸಿರುವ ಬಗ್ಗೆ ರಕ್ತದ ಮಾದರಿಯನ್ನು ವಿದಿವಿಧಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.

ಘಟನೆ ಸ್ಥಳಕ್ಕೆ ತೆರಳಿದಾಗ ಗ್ರಾಮಸ್ಥರು ಹೆಚ್ಚಿನ ಪರಿಹಾರ ಒದಗಿಸುವಂತೆ ಮನವಿಮಾಡಿದ್ದಾತೆ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಕೃಷ್ಣಬೈರೇಗೌಡ ಹೇಳಿದರು.

ಮೃತರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ

ನನ್ನ ತಾಯ್ನೆಲದಲ್ಲಿ ದುರಂತ ಸಂಭವಿಸಿದೆ. ನನ್ನೂರಿನ ಪ್ರೀತಿಯಿಂದ ದುರಂತ ಸ್ಥಳಕ್ಕೆ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಜೆಡಿಎಸ್ ಪಕ್ಷದಿಂದ 1 ಲಕ್ಷ ಪರಿಹಾರ ನೀಡುತ್ತೇವೆ. ಮುಖ್ಯಮಂತ್ರಿಗಳು 5 ಲಕ್ಷ ರೂ.ಪರಿಹಾರ ಘೋಷಣೆಮಾಡಿದ್ದಾರೆ. ಅವರಿಗೆ ಪರಿಹಾರದ ಮೊತ್ತ ಹೆಚ್ಚು ಮಾಡುವಂತೆ ಮನವಿಮಾಡುತ್ತೇನೆ. ಗಂಭೀರ ಗಾಯಗೊಂಡವರಿಗೆ ಪಕ್ಷದಿಂದ 25 ಸಾವಿರ ರೂ., ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 20 ಸಾವಿರ ರೂ. ಚಿಕ್ಕ ಪುಟ್ಟ ಗಾಯಗೊಂಡವರಿಗೆ 15 ಸಾವಿರ ರೂಗಳನ್ನು ಪಕ್ಷದಿಂದ ನೀಡುವುದಾಗಿ ಹೇಳಿದರು. ಮೋದಿಯವರು ಮಣಿಪುರದಲ್ಲಿದ್ದರೂ ಕೂಡ ದುರಂತದ ಬಗ್ಗೆ ಮಾಹಿತಿ ಪಡೆದು ಪರಿಹಾರ ಘೋಷಿಸಿದ್ದಾರೆ ಎಂದರು.

ರಾತ್ರಿಯೇ ಮೃತದೇಹಗಳ ಹಸ್ತಾಂತರ

ಗಣಪತಿ ಮೆರವಣಿಗೆ ಮೇಲೆ ಟ್ರಕ್ ಹರಿದು ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಂದತೆ 10 ಜನ ಸಾವಿಗೀಡಾಗಿದ್ದು, ರಾತ್ರಿಯೇ ಮೃತರ ಮರೋಣೊತ್ತರ ಪರೀಕ್ಷೆ ನಡೆಸಿ ಬೆಳಗ್ಗೆ 4ಗಂಟೆ ವೇಳೆಗೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಸೂಕೊ ಟೀಂನಿಂದ ಪರಿಶೀಲನೆ

ಅಪಘಾತ ಕಾರಣ ತಿಳಿಯಲು ತನಿಖೆ ಅರಂಭವಾಗಿದ್ದು, ಸೂಕೊ ಟೀಂನಿಂದ ಪರಿಶೀಲನೆ ನಡೆಸಲಾಯಿತು.

ತಜ್ಞರ ತಂಡ ಘಟನಾ ಸ್ಥಳವನ್ನು ಇಂಚಿಂಚೂ ಪರಿಶೀಲನೆ ನಡೆಸಿತು. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಗೊರೂರು ಪಿಎಸ್‌ಐ ಧನರಾಜ್ ನೇತೃತ್ವದಲ್ಲಿ ಮಹಜರ್ ಪ್ರಕ್ರಿಯೆ ನಡೆಯಿತು.

ಸ್ವಯಂಪ್ರೇರಿತ ಬಂದ್: ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮುಂಜಾಗೃತ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.

ಟ್ರಕ್ ವಶಕ್ಕೆ

ಒಂಭತ್ತು ಜನ ಅಮಾಯಕರನ್ನು ಬಲಿ ಪಡೆದ ಯಮಸ್ವರೂಪಿ ಟ್ರಕ್‌ನ್ನು ಗೊರೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಸಿ ಒಳಗೊಂಡ ಟ್ರಕ್‌ನಲ್ಲಿ ಕೋವಾ ಸಾಗಿಸಲಾಗುತ್ತಿತ್ತು. ಎಂಎಚ್-23 ಅಯು 3605 ನಂಬರ್‌ನ ಟ್ರಕ್.

ಡಿಕ್ಕಿ ರಭಸಕ್ಕೆ ಟ್ರಕ್‌ನ ಗ್ಲಾಸ್, ಹೆಡ್ ಲೈಟ್ ಒಡೆದು ಹೋಗಿದೆ. ಟಯರ್ ಗಳು ರಕ್ತ ಸಿಕ್ತವಾಗಿವೆ.

ಇನ್ನು ಪೊಲೀಸ್ ಬಂದೋ ಬಸ್ತ್ ಮಾಡಬೇಕಿತ್ತು

ಮೊಸಳೆಹೊಸಳ್ಳಿ ಗ್ರಾಮ ಹಾಗೂ ಜಿಲ್ಲಾಸ್ಪತ್ರೆಗೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದಿತ್ತು. ಪ್ರಕರಣದಿಂದ ಇಡೀ ರಾಜ್ಯದ ಜನ ದಿಗ್ಭ್ರಾಂತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸ್ಪಂದಿಸಿವೆ.

ಮೃತಪಟ್ಟವರಲ್ಲಿ ಯುವಕರೇ ಹೆಚ್ಚಿದ್ದಾರೆ. ಅವರ ಕುಟುಂಬಗಳು ಬಡತನದಲ್ಲಿವೆ. ನಾನು ರಾಜ್ಯ ಸರ್ಕಾರದ ಜತೆ ಮಾತನಾಡಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಪೊಲೀಸರು ಕ್ರಮ ಕೈಗೊಂಡಿದ್ದರೂ ಜನರ ಮೇಲೆ ಟ್ರಕ್ ಹರಿದಿದೆ. ಇಂತಹ ಮೆರವಣಿಗೆಗಳು ನಡೆಯಬೇಕಾದರೆ ಇನ್ನೂ ಹೆಚ್ಚು ಪೊಲೀಸ್ ಬಂದೋಬಸ್ತ್ ಮಾಡಬೇಕಿತ್ತು. ಹಂಪ್ ಹಾಕಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಹಂಪ್ ಹಾಕಲು ಹೇಳುತ್ತೇನೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಬೆಳ್ಳೂರು ಕ್ರಾಸ್ ಆಸ್ಪತ್ರೆಗೆ ಭುವನೇಶ್

ಒಂಭತ್ತು ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕ ಭುವನೇಶ್ ನನ್ನು ಬೆಳ್ಳೂರು ಕ್ರಾಸ್ ಬಿಜಿಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಭುವನೇಶ್ ಮದ್ಯ ಸೇವನೆ ಮಾಡಿದ್ದನಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಭುವನೇಶ್ ರಕ್ತದ ಮಾದರಿಯನ್ನು ವಿದಿವಿಧಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.