ಜಿಲ್ಲೆ

ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯಅವರ ತೇಜೋವಧೆ: ಕೆ.ಎನ್.ರಾಜಣ್ಣ

ಹಾಸನ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಪ್ರಭಾವಿ ನಾಯಕ, ದೇವರಾಜ ಅರಸು, ಬಂಗಾರಪ್ಪ ಅವರ ನಂತರ ಅಹಿಂದ ವರ್ಗದ ಜನಪ್ರಿಯ ಲೀಡರ್. ರಾಜಕೀಯ ದುರುದ್ದೇಶದಿಂದ ಅವರ ತೇಜೋವಧೆ ಮಾಡುವ ಕೆಲಸ ಯಾರೂ ಯಾರಿಗೂ ಮಾಡಬಾರದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ 40 ವರ್ಷ ರಾಜಕಾರಣ ಮಾಡಿದ್ದಾರೆ. ಏನಾದರೂ ಮಾಡಿ ಅವರ ಹೆಸರಿಗೆ ಮಸಿ ಬಳಿದು, ಅವರ ಜನಪ್ರಿಯತೆ ಕಡಿಮೆ ಮಾಡಬೇಕು, ಹಾಗಾದರೆ ಕಾಂಗ್ರೆಸ್ ಶಕ್ತಿ ಕುಂದಲಿದೆ. ಆ ದೃಷ್ಟಿಯಿಂದ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದ್ದಾರೆ ದೂರಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ, ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರ ಮೇಲೆ ಪ್ರಭಾವ ಬೀರಿ ಪ್ರಾಸಿಕ್ಯೂಸೆನ್‌ಗೆ ಅನುಮತಿ ಕೊಡಿಸಲಾಗಿದೆ. ಆದರೆ, ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ. ನಿವೇಶನ ಹಂಚಿಕೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದರು. ಬಿಜೆಪಿ ಪಕ್ಷದ ಅಧ್ಯಕ್ಷರು, ಶಾಸಕರು, ಜೆಡಿಎಸ್, ಕಾಂಗ್ರೆಸ್ ಶಾಸಕರಿರುವ ಸಭೆಯಲ್ಲಿ ನಿವೇಶನ ಹಂಚಿಕೆಯಾಗಿದೆ. ಸೈಟ್ ವಿತರಣೆಯಾಗುವಾಗ ಅವರು ಅಧಿಕಾರದಲ್ಲಿ ಇರಲಿಲ್ಲ, ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
ಮುಡಾ ಹಗರಣ ಸಂಬಂಧ ಹಿಂದಿನ ಆಯುಕ್ತರನ್ನು ಅಮಾನತು ಮಾಡಿರುವ ಕ್ರಮ ಸರಿಯಿದೆ. ತಪ್ಪು ಮಾಡಿದ್ದಾನೆ, ಅದಕ್ಕೆ ಶಿಕ್ಷೆ ಆಗುತ್ತದೆ. ಮುಖ್ಯಮಂತ್ರಿ ಅಧಿಕಾರಿ ಮೇಲೆ ಪ್ರಭಾವ ಬೀರಿ ನಿವೇಶನ ಪಡೆದುಕೊಂಡಿದ್ದರೆ ಏಕೆ ಅಮಾನತು ಮಾಡುತ್ತಿದ್ದರು. ಅವರ ಪರವಾಗಿ ಇದ್ದವನನ್ನು ಅಮಾನತು ಮಾಡುತ್ತಾರೆಯೇ ಎಂದು ಕೇಳಿದರು.
ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತಹವರು ನಮ್ಮಲ್ಲೇ ಇದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ, ಅವನ ಸಾವಿಗೆ ಯಾರು ಕಾರಣ ಮೀರ್ ಸಾಧಿಕ್. ಕಿತ್ತೂರುರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಿದ್ದರು, ಅವರು ಬ್ರಿಟೀಷರ ವಿರುದ್ಧ ಸೋಲಲು, ಸೆರೆ ಸಿಕ್ಕಲು ಕಾರಣ ಮಲ್ಲಪ್ಪಶೆಟ್ಟಿ. ಹಾಗೆಯೇ ನಮ್ಮ ದೇಶದ ಇತಿಹಾಸ ಇದ್ದೇ ಇರುತ್ತೆ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಆಗುತ್ತೆ, ಸಂಗೊಳ್ಳಿರಾಯಣ್ಣನ ಕಲ್ಪನೆ ಇಟ್ಟುಕೊಂಡು ಹೇಳಿದ್ದಾರೆ. ಈ ಸರ್ಕಾರದ ಬಗ್ಗೆ ಅವರೇನು ಹೇಳಿಲ್ಲ. ಈ ರಾಜಕೀಯ ಸನ್ನಿವೇಶಕ್ಕೆ ಅದನ್ನು ಹೋಲಿಕೆ ಮಾಡಲು ಹೋಗಬೇಡಿ ಎಂದರು.
ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ಮುಖ್ಯಮಂತ್ರಿಯಾಗುವೆ ಎಂಬ ಆರ್.ವಿ.ದೇಶಪಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಕುರ್ಚಿ ಖಾಲಿ ಇದ್ದರೆ ಕೇಳಬೇಕು. ಸಿಎಂ ಕುರ್ಚಿ ಇರೋದೆ ಒಂದು, ಅದು ಭರ್ತಿಯಾಗಿದೆ. ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದು. ಮುಖ್ಯಮಂತ್ರಿ ಕುರ್ಚಿ ಖಾಲಿ ಆದ ಮೇಲೆ ಕೇಳಲಿ, ದೇಶಪಾಂಡೆ ಅವರೊಬ್ಬರೇ ಅಲ್ಲ, ಅವರ ರೀತಿ ಒಂದು ಪಟ್ಟಿಯೇ ಇದೆ. ಸಿದ್ದರಾಮಯ್ಯ ಒಪ್ಪಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ. ಆದರೆ, ಹೈಕಮಾಂಡ್ ಒಪ್ಪಿದರೆ ಮಾತ್ರ ಮುಖ್ಯಮಂತ್ರಿ ಆಗೋದು. ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ ಎಂದರು.

ಚನ್ನಪಟ್ಟಣ ಚುನಾವಣೆ ಗೌರವದ ಪ್ರಶ್ನೆ:
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿಸಿಎಂ ಡಿಕೆಶಿ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಹೈಕಮಾಂಡ್ ಹೇಳಿದವರು ನಿಲ್ತಾರೆ. ಬಿ ಫಾರಂ ಕೋರೋರು ಅವರು, ಶಿವಕುಮಾರ್ ಅಪೇಕ್ಷೆ ವ್ಯಕ್ತಪಡಿಸಿದರೆ ಅವಕಾಶ ಕೊಡಬಹುದು, ಇನ್ನೊಬ್ಬರು ಬಯಸಿದರೆ ಅವರಿಗೂ ಕೊಡಬಹುದು. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಅವರ ಜಿಲ್ಲೆಗೆ ಚನ್ನಪಟ್ಟಣ ಕ್ಷೇತ್ರ ಸೇರಲಿದೆ. ಅವರ ಅಸ್ತಿತ್ವ, ಜನಪ್ರಿಯತೆಯನ್ನು ಚುನಾವಣೆ ಪರೀಕ್ಷೆಗೆ ಒಡ್ಡಲಿದೆ. ಚನ್ನಪಟ್ಟಣ ಚುನಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳಲಿದೆ. ಚುನಾವಣೆ ಗೆಲ್ಲಲು ಎಲ್ಲಾ ಮುಖಂಡರು ಪ್ರಯತ್ನ ಮಾಡ್ತೇವೆ. ಯಾರೇ ನಿಂತರೂ, ಎಲ್ಲರೂ ಅಭ್ಯರ್ಥಿ ಎಂದು ಕೆಲಸ ಮಾಡ್ತೀವಿ, ಅಭ್ಯರ್ಥಿ ನಿಮಿತ್ತ ಅಷ್ಟೆ. ಚನ್ನಪಟ್ಟಣ ಉಪ ಚುನಾವಣೆ ಕಾಂಗ್ರೆಸ್ ಪಕ್ಷದ ಮಾನ, ಮರ್ಯಾದೆ ನಮ್ಮ ಗೌರವದ ಪ್ರಶ್ನೆ ಎಂದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯದಲ್ಲಿ ಆಗಲಿದೆ ಎಂದು ನಾನೇನು ಅನ್ಕೊಂಡಿಲ್ಲ. ಇಂದಲ್ಲ ನಾಳೆ ಆಗಲಿದೆ, ಅದು ಸದ್ಯದಲ್ಲೇ ಆಗಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.