ಜಿಲ್ಲೆ

ರಾಜಕೀಯ ದುರುದ್ದೇಶದಿಂದ ಮುಸ್ಲಿಂ ಮೀಸಲಾತಿ ರದ್ದು: ಅಬ್ದುಲ್ ಸಮದ್

ಹಾಸನ : ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಮುಸಲ್ಮಾನರ ಮೀಸಲಾತಿ ರದ್ದು ಮಾಡಿರುವುದು ನಿಜಕ್ಕೂ ಖಂಡನೀಯ. ಆದರೆ ನಾವು ಅದನ್ನು ವಾಪಸ್ ಪಡೆಯುವಂತೆ ಒತ್ತಾಯಿಸುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಈ ರೀತಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಆದರೆ ನಮ್ಮ ಮುಸ್ಲಿಂ ಬಾಂಧವರು ರಸ್ತೆಗಿಳಿದು ಪ್ರತಿಭಟನೆ ಮಾಡುವುದಿಲ್ಲ. ಇನ್ನೆರಡು ತಿಂಗಳಲ್ಲಿ ಇವರ ಸರ್ಕಾರ ಮನೆಗೆ ಹೋಗಲಿದೆ. ಆನಂತರ ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಮೇಲೆ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತೇವೆ ಎಂದು ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಹೇಳಿದರು.

ಏಕಾಏಕಿ ರಾಜಕೀಯದ ಲಾಭಕ್ಕಾಗಿ ದ್ವೇಷ ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಬಿಜೆಪಿಯವರು ಶೇ.4ರಷ್ಟು ಮೀಸಲಾತಿಯನ್ನು ಯಾವುದೇ ಅಧ್ಯಯನದ ವರದಿ ಇಲ್ಲದೆ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ನ್ಯಾಯಮೂರ್ತಿ ನಾಗನಗೌಡ ಮತ್ತು ನ್ಯಾಯಮೂರ್ತಿ ವೆಂಕಟಸ್ವಾಮಿ ಅವರ ಆಯೋಗ ಹಾಗೂ 1990ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ವರದಿಯ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಇದರಿಂದ ನಮಗೆ ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅನುಕೂಲವಾಗುತ್ತಿತ್ತು. ಇದನ್ನು ರದ್ದುಗೊಳಿಸಿದ್ದು ಇದಕ್ಕೆ ನಾವು ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಸಲ್ಮಾನರನ್ನು ಟಾರ್ಗೆಟ್ ಮಾಡಿಕೊಂಡು ಹಿಜಾಬ್, ಹಲಾಲ್, ಜಟ್ಕಾ ಸೇರಿದಂತೆ ಮುಸ್ಲಿಂ ಪದ್ಧತಿಗಳ ಮೇಲೆ ಕಾನೂನುಗಳನ್ನು ತರಲಾಯಿತು. ಇದೀಗ ನಮ್ಮ ಹಕ್ಕನ್ನು ಕೂಡ ಕಸಿದುಕೊಳ್ಳಲು ಮುಂದಾಗಿದ್ದಾರೆ. ನಾವು ಪ್ರತಿಭಟನೆ ಮಾಡಿದರೆ ನಮ್ಮಗಳ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ನಮ್ಮನ್ನೇ ಆರೋಪಿಗಳಂತೆ ಮಾಡುತ್ತಾರೆ. ಅದರ ಬದಲಾಗಿ ನಮ್ಮ ಗುರುಗಳು ಮತ್ತು ಧರ್ಮದ ಮುಖಂಡರ ಜೊತೆ ಚರ್ಚೆ ನಡೆಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀದ್ ಮನ್ಸೂರ್, ಉಪಾಧ್ಯಕ್ಷ ಮಹಮದ್ ಫೈರೋಜ್ ಗಾಂಧಿ, ಮಹಮ್ಮದ್ ಆಚಂಗಿ, ಮನ್ಸೂರ್ ಮಹಮ್ಮದ್ ಹಾಜರಿದ್ದರು.