ಜಿಲ್ಲೆ

ರಾಜಕೀಯ ಚಕ್ರವ್ಯೆಹದಲ್ಲಿ ಎಚ್‌ಡಿಕೆ?

ಗಂಗಾಧರ್ ಬೈರಾಪಟ್ಟಣ ರಾಮನಗರ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕುವ ರಾಜಕೀಯ ಯತ್ನ ನಡೆದಿದೆಯೇ? ಇಂತಹದೊಂದು ಪ್ರಶ್ನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಚನ್ನಪಟ್ಟಣದ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಎಚ್‌ಡಿಕೆ ಅವರಿಗೆ ರಾಜಕೀಯ ಚಕ್ರವ್ಯೆಹ ಸೃಷ್ಟಿಯಾಗುತ್ತಿರುವ ಮುನ್ಸೂಚನೆ ನೀಡಿದೆ.

ಮುಂದಿನ ಚುನಾವಣೆಯಲ್ಲಿ ಮಿಷನ್ 123, ನಮ್ಮ ಪಕ್ಷವಿಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂಬೆಲ್ಲಾ ಹೇಳಿಕೆಗಳನ್ನು ಕೊಟ್ಟು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವತ್ತ ಚಿತ್ತಹರಿಸಿರುವ ಎಚ್‌ಡಿಕೆಗೆ ತವರು ಕ್ಷೇತ್ರ ರಾಮನಗರ ಮತ್ತು ಹಾಲಿ ಕ್ಷೇತ್ರ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಅಷ್ಟೊಂದು ಪೂರಕವಾಗಿ ಕಾಣುತ್ತಿಲ್ಲ.

ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪರ್ಧೆ ವಿಚಾರ ಇನ್ನೂ ಹಸಿರಾಗಿದ್ದರೆ, ಅತ್ತ ಚನ್ನಪಟ್ಟಣದಲ್ಲಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಎಚ್‌ಡಿಕೆ ಹಿಂಬಾಲಕರನ್ನು ಕಮಲ ಮುಡಿಯುವಂತೆ ಮಾಡುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ಇದು ನಾಮಪತ್ರ ಸಲ್ಲಿಸಿ ಉಳಿದ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತಿದ್ದ ಎಚ್‌ಡಿಕೆ ಅವರಿಗೆ ನುಂಗಲಾರದ ತುತ್ತಾಗುವಂತೆ ಕಾಣುತ್ತಿದೆ.

ಚನ್ನಪಟ್ಟಣವೂ ಕೈತಪ್ಪುವುದೇ?: ಎಚ್‌ಡಿಕೆ ಮುಂದಿನ ಚುನಾವಣೆಯನ್ನು ಚನ್ನಪಟ್ಟಣದಿಂದಲೇ ಎದುರಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಅವರ ಹಿಡಿತ ಹಂತ ಹಂತವಾಗಿ ತಪ್ಪುತ್ತಿರುವ ಸೂಚನೆ ದೊರೆತಿದೆ. ಎಚ್‌ಡಿಕೆ ಅವರ ಕಟ್ಟಾ ಬೆಂಬಲಿಗರು ಒಬ್ಬೊಬ್ಬರೇ ಪಕ್ಷ ಬಿಡುತ್ತಿರುವುದು ಕುಮಾರಸ್ವಾಮಿ ಅವರ ಬುಡ ಅಲುಗಾಡುವಂತೆ ಮಾಡಿದೆ. ಅಲ್ಲದೆ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪ್ರಮುಖವಾಗಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನೇ ಟಾರ್ಗೆಟ್ ಮಾಡಿಕೊಂಡು ಬಿಜೆಪಿಗೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ಎಚ್‌ಡಿಕೆ ಪಾಲಿಗೆ ಮುಂದಿನ ಚನ್ನಪಟ್ಟಣ ಚುನಾವಣೆಯೂ ಅಷ್ಟು ಸಲೀಸಲ್ಲ ಎನ್ನುವ ಚಿತ್ರಣ ಕಟ್ಟಿಕೊಡುತ್ತಿದೆ. ಇದರ ಹೊರತಾಗಿಯೂ ಎಚ್‌ಡಿಕೆ ಇತ್ತೀಚಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರ ಸಂಚಾರವನ್ನು ಹೆಚ್ಚಿಸಿದ್ದಾರೆ. ಇದೆಲ್ಲದಕ್ಕೂ ಕ್ಷೇತ್ರ ಕೈತಪ್ಪುವ ಆತಂಕವೇ ಕಾರಣ ಎನ್ನುತ್ತಾರೆ ಸ್ಥಳೀಯರು.

ಕಾಂಗ್ರೆಸ್-ಬಿಜೆಪಿ ಕ್ರಮವಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಹೆಣೆಯುತ್ತಿರುವ ಚಕ್ರವ್ಯೆಹವನ್ನು ಎಚ್‌ಡಿಕೆ ಭೇದಿಸುವರೇ ಎನ್ನುವ ಪ್ರಶ್ನೆಯೂ ಮೂಡಿದೆ. ಈ ಎರಡೂ ಕ್ಷೇತ್ರಗಳು ಎಚ್‌ಡಿಕೆ ಪಾಲಿಗೆ ಪ್ರತಿಷ್ಠೆಯ ಕಣಗಳು. ಇಲ್ಲಿನ ಗೆಲುವು ಅವರ ಪಾಲಿಗೆ ರಾಜ್ಯದ ಗೆಲುವಾಗುತ್ತದೆ. ಒಂದು ವೇಳೆ ಸೋತರೆ ಅವರಿಗೆ ಇಡೀ ರಾಜ್ಯವನ್ನು ಗೆದ್ದರೂ ತೃಪ್ತಿ ತಂದುಕೊಡುವುದಿಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಜತೆಗೆ ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿರುವುದರಿಂದ ಎಚ್‌ಡಿಕೆ ಯಾವ ರೀತಿಯ ತಂತ್ರಗಾರಿಕೆ ಹೆಣೆಯುತ್ತಾರೆ ಎನ್ನುವ ಕುತೂಹಲ ಮೂಡಿದೆ.

ರಾಮನಗರಕ್ಕೆ ನಿಖಿಲ್: ಈಗಾಗಲೇ ಮಂಡ್ಯ ಲೋಕಸಭೆ ಚುನಾವಣೆ ಮೂಲಕ ಅಖಾಡಕ್ಕೆ ಇಳಿದು ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಅದೃಷ್ಟ ಪರೀಕ್ಷೆ ಮಾಡುವುದು ನಿಶ್ಚಿತ. ಆದರೆ ಕಾಂಗ್ರೆಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದರ ಮೇಲಷ್ಟೇ ಇವರ ಸೋಲು ಗೆಲುವು ನಿರ್ಧಾರವಾಗಲಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಸ್ಪರ್ಧೆ ಖಚಿತವಾದರೆ ನಿಖಿಲ್ ದಾರಿ ಅಷ್ಟು ಸುಲಭವಲ್ಲ. ಉಳಿದಂತೆ ಇನ್ಯಾರೇ ಸ್ಪರ್ಧಿಸಿದರೂ ಗೆಲುವು ಹತ್ತಿರದಲ್ಲಿಯೇ ಸುಳಿಯುತ್ತದೆ.

ಗುಟ್ಟು ಬಿಡದ ಡಿಕೆಶಿ: ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರ ಹಳೆಯದ್ದೇ. ಆದರೆ, ಇದನ್ನು ಸಾರಾಸಗಟಾಗಿ ತಳ್ಳಿ ಹಾಕದ ಡಿಕೆಶಿ ಈ ವಿಚಾರವನ್ನು ಇನ್ನೂ ಜೀವಂತವಾಗಿಯೇ ಇಟ್ಟಿದ್ದಾರೆ. ಕನಕಪುರದವರು ನನ್ನನ್ನು ಬೆಳೆಸಿದ್ದಾರೆ ಎಂದು ಹೇಳಿರುವ ಡಿಕೆಶಿ, ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎನ್ನುವ ಮೂಲಕ ತಮ್ಮ ಬಳಿ ರಾಮನಗರದ ಆಯ್ಕೆಯೂ ಇದೆ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದರೊಂದಿಗೆ ಸುಲಭವಾಗಿ ಜೆಡಿಎಸ್‌ಗೆ ದಕ್ಕುತ್ತಿದ್ದ ರಾಮನಗರ ಕ್ಷೇತ್ರ ಡಿಕೆಶಿ ಸ್ಪರ್ಧೆ ಮಾಡಿದರೆ ಖಂಡಿತವಾಗಿ ಕಬ್ಬಿಣದ ಕಡಲೆ ಆಗಲಿದೆ. ಇಲ್ಲಿ ಜೆಡಿಎಸ್ ಸಾಕಷ್ಟು ಬೆವರು ಹರಿಸಬೇಕಾಗುವುದು ನಿಶ್ಚಿತ.