ಜಿಲ್ಲೆ

ರಾಜಕೀಯ ಕಾರಣಕ್ಕಾಗಿ ಜಾತಿ ಜನಗಣತಿ ವಿರೋಧ: ಕೆ.ಎಸ್.ಶಿವರಾಮ್ ಆರೋಪ

ಮೈಸೂರು

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಜಾತಿ ಜನಗಣತಿ ವರದಿ ತಯಾರಿಸಲಾಗಿದೆ. ಆದರೆ, ಇದನ್ನು ರಾಜಕೀಯ ಕಾರಣಕ್ಕಾಗಿ ಕೆಲವು ಮೇಲ್ವರ್ಗದವರು ವಿರೋಧಿಸುತ್ತಿದ್ದಾರೆಯೇ ಹೊರತು ಬೇರೆ ಯಾವ ಕಾರಣವೂ ಇಲ್ಲ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ದೂರಿದರು.

ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಕೆಲವರು ಹೇಳುತ್ತಿದ್ದು, ರಾಜ್ಯದ ಇತಿಹಾಸವನ್ನು ಒಮ್ಮೆ ಅಧ್ಯಯನ ಮಾಡಿ ನೋಡಿ. ಯಾವ ಸಮುದಾಯದವರು ಹೆಚ್ಚು ರಾಜ್ಯವನ್ನು ಆಳಿದ್ದಾರೆ? ಎಷ್ಟು ಜನ ಮುಖ್ಯಮಂತ್ರಿ ಆಗಿದ್ದಾರೆ? ಮಂತ್ರಿಯಾಗಿದ್ದಾರೆ?

ಹಿಂದುಳಿದ ಸಮುದಾಯವರಿಗೆ ಎಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಎಂಬುದು ತಿಳಿಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶೇ.85ರಷ್ಟು ಹಿಂದುಳಿದ ಜಾತಿಗಳಿವೆ. ಇವುಗಳು ನ್ಯಾಯ ಕೇಳೋದು ತಪ್ಪು ಎಂಬುವಂತೆ ಬಿಂಬಿಸಲಾಗಿದೆ.

ಈ ವರದಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಹೇಳಲಿ, ಅದನ್ನು ಸರಿಪಡಿಸಲು ನಾವು ಕೂಡ ಹೋರಾಟ ಮಾಡುತ್ತೇವೆ. ಅದನ್ನು ಬಿಟ್ಟು ವಿರೋಧ ಸಲ್ಲದು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಲಿಂಗಾಯತ ಸಮುದಾಯದ ಮತಗಳಿಂದಲೇ ಗೆದ್ದು ಬರಲಿ ಎಂದು ಸವಾಲು ಹಾಕಿದರು.

ಈ ವರದಿಯನ್ನು ವಿರೋಧ ವ್ಯಕ್ತಪಡಿಸುವ ಬ್ರಾಹ್ಮಣರಿಗೆ ಏಕಾಏಕಿ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಕೇಂದ್ರ ಸರ್ಕಾರವು ಯಾವ ಅಂಕಿ-ಅಂಶಗಳ ಆಧಾರದ ಮೇಲೆ ನೀಡಿತು ಎಂದು ಪ್ರಶ್ನಿಸಿದರು.

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎನ್.ಎಸ್.ಪ್ರಕಾಶ್, ಜಿಲ್ಲಾ ಮಡಿವಾಳ ಸಂಘದ ಉಪಾಧ್ಯಕ್ಷ ಕೇಶವ್ ವಿಜಿ, ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ನಂಜುಂಡಸ್ವಾಮಿ ಇನ್ನಿತರರಿದ್ದರು.