ಬೇಲೂರು: ಭಾರತದ ಎಲ್ಲ ಸಮಾಜಕ್ಕೂ ಅನುಕೂಲ ಕಲ್ಪಿಸುವಂತಹ ಸಂವಿಧಾನ ಬರೆದು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ತಾಲೂಕಿನ ತೊಳಲು ಹೊಸಪೇಟೆ ಸರ್ಕಲ್‌ನಲ್ಲಿ ನಿರ್ಮಿಸುತ್ತಿರುವುದು ಸ್ವಾಭಿಮಾನದ ಸಂಕೇತವಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ತೊಳಲು ಹೊಸಪೇಟೆ ಸರ್ಕಲ್‌ನಲ್ಲಿ ನೂತನವಾಗಿ ನಿರ್ಮಿಸಲೂದ್ದೇಶಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದ ಆಶಯದಂತೆ ದೇಶದ ಜನರು ನಡೆದರೆ ಮುಂದಿನ ಶತಮಾನಗಳಲ್ಲೂ ದೇಶ ಒಗ್ಗಟ್ಟಾಗಿ ಒಕ್ಕೂಟ ವ್ಯವಸ್ಥೆ ಉಳಿದು ಶಾಂತಿಯುತ ಬದುಕು ರೂಪಿಸಲು ಅನುಕೂಲವಾಗುತ್ತದೆ. ಆದರೆ ಚುನಾವಣೆ ಸಂದರ್ಭ ಒಂದು ಪಕ್ಷದವರು ಆ ಧರ್ಮ, ಈ ಧರ್ಮ ಎನ್ನುವ ಧರ್ಮ ದಂಗಲ್‌ಗಳನ್ನು ತೆಗೆದು ರಾಜಕೀಯ ಉದ್ದೇಶಕ್ಕಾಗಿ ದೇಶವನ್ನು ಒಡೆಯುವ ಕೆಲಸ ಮಾಡಿದರೆ, ಅವರನ್ನೂ ಭಯೋತ್ಪಾದಕರು ಎನ್ನಬೇಕಾಗುತ್ತದೆ. ಇಲ್ಲಿ ಎಲ್ಲ ಧರ್ಮಗಳು ಶ್ರೇಷ್ಠ. ಯಾವುದು ಕೀಳು ಅಲ್ಲ, ಮೇಲೂ ಅಲ್ಲ. ಜಾತಿ ಧರ್ಮಗಳನ್ನು ಅವರವರ ಮನೆಗಳಲ್ಲಿ ಆಚರಿಸಲಿ. ನಾವು ದೇಶದ ಪ್ರಶ್ನೆ ಬಂದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿರುವ ನಮಗೆ ಅತ್ಯಂತ ಶ್ರಷ್ಠವಾದ ಗ್ರಂಥ ಯಾವುದೆಂದರೆ ಅದು ಡಾ.ಅಂಬೇಡ್ಕರ್‌ರವರು ಬರೆದು ಕೊಟ್ಟಂತಹ ಸಂವಿಧಾನ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು, ಕಾನೂನುಗಳನ್ನು ಗೌರವಿಸಬೇಕಿದೆ. ಮತ್ತು ತೊಳಲು ಹೊಸಪೇಟೆಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ. ಮತ್ತು ತಾಲೂಕು ಕಚೇರಿ ಮುಂದೆ 10 ಅಡಿ ಪ್ರತಿಮೆಯನ್ನು ದಿನಾಂಕ ನಿಗದಿ ಪಡಿಸಿ ಅದ್ದೂರಿ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 50 ವರ್ಷ ವಿಧಾನಸಭೆಗೆ ಮೀಸಲಾತಿ ಇತ್ತು. ಆದರೆ ನಮ್ಮನಾಳಿದ ಯಾವ ಶಾಸಕರು ಬೇಲೂರಿನಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಲಿಲ್ಲ. ನಂತರದಲ್ಲಿ ಮೀಸಲಾತಿ ಇರುವ ಬೇಲೂರಿನ ಹೃದಯ ಭಾಗದಲ್ಲೆ ಡಾ.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಬೇಕೆಂದು ತೀರ್ಮಾನಿಸಲಾಯಿತು, ಇಂದು ತಾಲೂಕಿನಲ್ಲಿ ದಾನಿಗಳು ಸಾಕಷ್ಟಿದ್ದಾರೆ. ಚುನಾವಣೆ ಸಂದರ್ಭ ಅವರ ಸೇವೆ ಪಡೆಯುವ ಪ್ರಯತ್ನ ಮಾಡಬೇಕಿದೆ. ಅಲ್ಲದೆ ನಮ್ಮ ಸಮುದಾಯ ಅಂಬೇಡ್ಕರ್‌ರವರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಣಡು ಮುಂದೆ ಸಾಗಬೇಕಿದೆ ಎಂದರು.
ಹೆಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್ ಮಾತನಾಡಿ, ಡಾ.ಅಂಬೇಡ್ಕರ್ ಅವರ ತತ್ವ ಸಿದ್ದಂತಾಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಕೇವಲ ದೇವಸ್ಥಾನ, ಮಂದಿರ ನಿರ್ಮಾಣಗಳಿಂದ ದೇಶದ ಬದಲಾವಣೆ ಸಾಧ್ಯವಿಲ್ಲ, ಮಹನೀಯರ ಪ್ರತಿಮೆ ನಿರ್ಮಿಸಿ ದರ್ಶನ ಮಾಡಿದರೆ ಅವರ ತತ್ವ ಸಿದ್ದಾಂತಗಳು ನಮ್ಮನ್ನು ಎಚ್ಚರಿಸುತ್ತವೆ. ಪ್ರತಿಮೆ ನಿರ್ಮಾಣಕ್ಕೆ ಸಂಘಟನೆ ಮುಖ್ಯ. ಒಗ್ಗಟ್ಟಿನಿಂದ ಕಾರ್ಯಕ್ರಮದ ರೂಪು ರೇಷಗಳನ್ನು ಮಾಡಿ ಶಾಶ್ವತವಾಗಿ ಉಳಿಯುವಂತೆ ಪ್ರತಿಮೆ ನಿರ್ಮಿಸಬೇಕು ಎಂದರು.
ಎಂ.ಎಸ್.ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತೊಳಲು ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರೆಗೌಡ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್, ಜಿಪಂ ಮಾಜಿ ಸದಸ್ಯರಾದ ಅಮೀತ್‌ಶೆಟ್ಟಿ, ಇಂದಿರಾ, ತಾಪಂ ಮಾಜಿ ಸದಸ್ಯರಾದ ಮಂಜುನಾಥ್, ಶಶಿಕುಮಾರ್, ಜೆಡಿಎಸ್ ಮುಖಂಡ ವೆಂಕಟೇಶ್, ಅಂಬೇಡ್ಕರ್ ಯುವಕ ಸಂಘದ ಗಂಗರಾಜು, ಶರತ್, ಲತಾ ವಸಂತಕುಮಾರ್, ರಘು, ಹೊನ್ನಯ್ಯ, ಅಣ್ಣಪ್ಪ, ಇತರರಿದ್ದರು,.