ಮಂಜುನಾಥ ಕೋಳಿಗುಡ್ಡ, ಬೆಳಗಾವಿ
ಸುಗಮ ಆಡಳಿತ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ, ತಾಲೂಕುಗಳ ವಿಭಜನೆ ಮಾಡುವುದು ಸರ್ಕಾರದ ಉದ್ದೇಶ. ಆದರೆ, ಇತ್ತೀಚಿನ ತೀರ್ಮಾನಗಳು ರಾಜಕೀಯ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿದ್ದು, ಸಾಲಿನಲ್ಲಿ ಬೆಳಗಾವಿ ಜಿಲ್ಲಾ ವಿಭಜನೆ ಮುನ್ನೆಲೆಯಲ್ಲಿ ಚರ್ಚೆಗೆ ಬರುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಸಿಂಹಪಾಲು ಪ್ರಾತಿನಿಧ್ಯ ಪಡೆದುಕೊಂಡಿರುವ, 18 ವಿಧಾನಸಭಾ ಕ್ಷೇತ್ರ, ಎರಡೂವರೆ ಲೋಕಸಭಾ ಕ್ಷೇತ್ರ, ಮೂರು ವಿಧಾನಪರಿಷತ್ ಕ್ಷೇತ್ರ ಒಳಗೊಂಡಿರುವ ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ಪ್ರಬಲ ಹಿಡಿತ ಸಾಧಿಸಲು ಜಾರಕಿಹೊಳಿ, ಕತ್ತಿ, ಸವದಿ, ಹೆಬ್ಬಾಳ್ಕರ ಸೇರಿ ಪ್ರತಿಷ್ಠಿತ ಕುಟುಂಬಗಳ ಸತತ ಪ್ರಯತ್ನವಿದ್ದರೂ ಸಹಕಾರ ಕ್ಷೇತ್ರದಲ್ಲಿನ ಹೊಂದಾಣಿಕೆ ರಾಜಕಾರಣದಿಂದಾಗಿ ಯಶಸ್ಸು ಕಂಡಿರಲಿಲ್ಲ.
ಸದ್ಯ ಬದಲಾದ ಪರಿಸ್ಥಿತಿಯಲ್ಲಿ ಶಾಸಕರು, ಸಂಸದರು ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವುದಕ್ಕಾಗಿಯೇ ಜಿಲ್ಲಾ ವಿಭಜನೆ ಕೂಗು ಹಾಕುತ್ತಿರುವುದು ಎದ್ದು ಕಾಣುತ್ತಿದೆ.
ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಕೇಂದ್ರವಾಗಿ ಮೂರು ಹೊಸ ಜಿಲ್ಲೆ ಮಾಡಬೇಕು ಎಂಬುದು ಹೋರಾಟಗಾರರ ಬೇಡಿಕೆ. ಬೈಲಹೊಂಗಲ ವಿಭಾಗದವರೂ ಪ್ರತ್ಯೇಕ ಜಿಲ್ಲೆಗೆ ಬೇಡಿಕೆಯಿಟ್ಟಿರುವುದರಿಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸರ್ಕಾರಗಳ ಅವಧಿಯಲ್ಲಿಯೇ ವಿಭಜನೆ ಆಗಬೇಕಿದ್ದ ಕೆಲಸ ನಿಂತಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸೇರಿದಂತೆ ಬಹುತೇಕ ಶಾಸಕರು ಜಿಲ್ಲಾ ವಿಭಜನೆ ವಿಷಯ ಸರ್ಕಾರದ ಮುಂದೆ ಮಂಡಿಸಿದ್ದಾರೆ.
ರಾಜಕೀಯ ಅಸ್ತಿತ್ವಕ್ಕಾಗಿ ಜಿಲ್ಲಾ ಘೋಷಣೆ!: ಪ್ರಾದೇಶಿಕವಾಗಿ ದೊಡ್ಡ ವ್ಯಾಪ್ತಿ ಹೊಂದಿರುವ ಜಿಲ್ಲೆಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡುವುದು ಮೂಲ ಉದ್ದೇಶವಾದರೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲೆ ಘೋಷಣೆಯಾಯಿತು. ತದನಂತರ ರಾಜಕೀಯ ಹಿತದೃಷ್ಟಿಯಿಂದಲೇ ಬಾಗಲಕೋಟೆ, ಯಾದಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಗಳು ಘೋಷಣೆಯಾದವು. ಈಚೆಗೆ ಬಿಜೆಪಿ
ಸರ್ಕಾರದ ಅವಧಿಯಲ್ಲೂ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಸೃಷ್ಠಿಯಾಯಿತು. ಐದು ದಶಕದ ಹೋರಾಟ ಕಂಡಿರುವ ಬೆಳಗಾವಿ ಜಿಲ್ಲೆ ವಿಭಜನೆ ಮಾತ್ರ ಕಗ್ಗಂಟಾಗಿಯೇ ಉಳಿದುಕೊಂಡಿದೆ.
ಹೋರಾಟಕ್ಕೆ ಧ್ವನಿಗೂಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ, ಚಿಕ್ಕೋಡಿ ಕೇಂದ್ರವಾಗಿ ಜಿಲ್ಲಾ ವಿಭಜನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂರು ಜಿಲ್ಲೆಗಳಾದರೆ ಮಾತ್ರ ಬೆಳಗಾವಿ ಭಾಗದ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.
ಇಂತಹದೇ ಹೇಳಿಕೆಗಳು ಇನ್ನುಳಿದ ಶಾಸಕರು, ಮುಖಂಡರಿಂದ ಕೇಳಿಬರುತ್ತಿರುವುದು ಚರ್ಚೆಯ ದಿಕ್ಕು ಬದಲಿಸುತ್ತಿದೆ. ಜಿಲ್ಲಾ ರಾಜಕಾರಣದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಜಾರಕಿಹೊಳಿ ಕುಟುಂಬದ ರಾಜಕಾರಣವನ್ನು ಗೋಕಾಕ್‌ಭಾಗಕ್ಕೆ ಮಾತ್ರ ಸೀಮಿತಗೊಳಿಸುವ ತಂತ್ರಗಾರಿಕೆಯೂ ಜಿಲ್ಲಾ ವಿಭಜನೆಯ ಒತ್ತಡದಲ್ಲಿ ಅಡಗಿದೆ.
ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಕೇಂದ್ರವಾಗಿ ಮೂರು ಹೊಸ ಜಿಲ್ಲೆ ರಚನೆಯಾದರೆ ಜಾರಕಿಹೊಳಿ ಕುಟುಂಬವನ್ನು ಗೋಕಾಕ ಜಿಲ್ಲೆಗೆ ಕಟ್ಟಿಹಾಕಬಹುದು ಎನ್ನುವ ಲೆಕ್ಕಾಚಾರ ಜಿಲ್ಲಾ ವಿಭಜನೆಯಲ್ಲಿದೆ ಎನ್ನುವ ಚರ್ಚೆ ಜಿಲ್ಲಾ ರಾಜಕಾರಣದಲ್ಲಿದೆ.
ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜಿಸಿದರೆ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬಹುದು. ದಸರಾ ಹಬ್ಬ ಮುಕ್ತಾಯಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು.| ಲಕ್ಷ್ಮೀ ಹೆಬ್ಬಾಳ್ಕರ್ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ರಾಜಕೀಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬಾರದು. ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ವಿಭಜನೆ ಆಗಬೇಕು. ಜಿಲ್ಲೆ, ತಾಲೂಕು ವಿಭಜನೆ ಕುರಿತು ಜನರ ಅಭಿಪ್ರಾಯ ಪಡೆದು ಸರ್ಕಾರ ಕ್ರಮ ವಹಿಸಲಿ.ಅಭಯ ಪಾಟೀಲ| ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ