ಜಿಲ್ಲೆ

ರಾಜಕೀಯ ಅಸ್ತಿತ್ವಕ್ಕಾಗಿ ಒಗ್ಗೂಡುವಿಕೆ ಅಗತ್ಯ

ಕಲಬುರಗಿ: ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸದೃಢರಾಗಲು ನೇಕಾರ ಸಮುದಾಯದವರು ಒಗ್ಗಟ್ಟಾಗುವುದು ಅತಿ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಬಿ.ಎಸ್.ಸೋಮಶೇಖರ ಹೇಳಿದರು.

ರಿಂಗ್‌ರೋಡ್‌ನ ಡಬರಾಬಾದ್ ಕ್ರಾಸ್ ಬಳಿಯ ಶ್ರೀ ದೇವರ ದಾಸಿಮಯ್ಯ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಲಬುರಗಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಚೇರಿ ಲೋಕಾರ್ಪಣೆ, ಪದಾಧಿಕಾರಿಗಳ ಪದಗ್ರಹಣ ಮತ್ತು ಆದರ್ಶ ನೇಕಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ೬೦ ಲಕ್ಷದಷ್ಟು ಜನರಿದ್ದರೂ ಸಣ್ಣ ಸಮಾಜವೆನಿಸಿದೆ. ಹೀಗಾಗಿ ಶಕ್ತಿ ಪ್ರದರ್ಶನ ಅಗತ್ಯ ಎಂದರು.

ರೈತನಷ್ಟೇ ನೇಕಾರ ಸಹ ಮುಖ್ಯ. ರೈತರಿಗೆ ಅನ್ಯಾಯವಾದಾಗ ಪ್ರತಿಭಟಿಸುವಂತೆ ನೇಕಾರನಿಗೂ ಅನ್ಯಾಯ ಆದಾಗ ಪ್ರತಿಭಟಿಸುವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಶೇ.೭೮ ನೇಕಾರರು ಕೈಮಗ್ಗ ಕೆಲಸ ಅವಲಂಬಿಸಿಲ್ಲ. ಅವಲಂಬಿತರಿಗೆ ಸರ್ಕಾರ ಸೌಲಭ್ಯ ನೀಡಬೇಕು. ೧೬೫-೧೭೦ ಕ್ಷೇತ್ರದಲ್ಲಿ ನೇಕಾರರಿದ್ದು, ಕೇವಲ ವೋಟ್ ಬ್ಯಾಂಕ್ ಆಗಿದ್ದೇವೆ ಹೊರತು ರಾಜಕೀಯ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿ ಪ್ರದೀಪ ಸಂಗಾ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕಲಬುರಗಿಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೆಕ್ಸ್ಟೈಲ್ ಪಾರ್ಕ್ ಕೆಲಸ ಬೇಗ ಆರಂಭಿಸಬೇಕು. ಇದನ್ನು ಬೇರೆಡೆ ಸ್ಥಳಾಂತರಿಸುವ ಹುನ್ನಾರ ನಡೆದಿದ್ದು, ಯಾವ ಕಾರಣಕ್ಕೂ ನೇಕಾರರು ಬಿಡುವುದಿಲ್ಲ. ಹಟಗಾರ ಸಮಾಜವನ್ನು ನೇಕಾರ ಸಮುದಾಯಗಳ ಒಕ್ಕೂಟದಲ್ಲಿ ಸೇರಿಸುವ ಕುರಿತ ಮನವಿಗೆ ಬೈಲಾದಲ್ಲಿ ತಿದ್ದುಪಡಿ ಮಾಡುವುದಾಗಿ ಹೇಳಿದರು.

ಮೈಂದರ್ಗಿ ಹಿರೇಮಠದ ಶ್ರೀ ಅಭಿನವ ರೇವಣಸಿದ್ಧ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಸಂಗಾ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಉಪಾಧ್ಯಕ್ಷರಾದ ನಾರಾಯಣರಾವ ಸಿಂಗಾಡೆ, ಬಲಭದ್ರ ಜಗದೀಶ, ಕಾರ್ಯದರ್ಶಿ ದಯಾನಂದ ಶೆಟ್ಟಿಗಾರ, ತೋಟಾಶೇಖಪ್ಪ ಗುಳೇದಗುಡ್ಡ, ರೇವಣಸಿದ್ದಪ್ಪ ಗಡ್ಡದ ವೇದಿಕೆಯಲಿದ್ದರು. ಆರಂಭದಲ್ಲಿ ಕಸ್ತೂರಿಬಾಯಿ ರಾಜೇಶ್ವರಿ ವಚನಗೀತೆ ಹಾಡಿದರು. ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ ಸ್ವಾಗತಿಸಿದರು. ಕುಶಾಲ ಯಡ್ಹಳ್ಳಿ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ವಂದಿಸಿದರು.