ಜಿಲ್ಲೆ

ರಾಜಕೀಯ ಅಧಿಕಾರ, ಸ್ಥಾನಮಾನ ಅನುಭವಿಸುವ ವೇಳೆ ಕುಟುಂಬ ರಾಜಕಾರಣದ ಅರಿವಾಗಿರಲಿಲ್ಲ: ಎಚ್.ಡಿ.ಕುಮಾರಸ್ವಾಮಿ

ಅರಸೀಕೆರೆ: ವಿಭಜನೆಯ ತಂತ್ರದಿಂದಲೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜಕೀಯ ಅಧಿಕಾರ, ಸ್ಥಾನಮಾನ ಅನುಭವಿಸುವ ವೇಳೆ ಕುಟುಂಬ ರಾಜಕಾರಣದ ಅರಿವಾಗಿರಲಿಲ್ಲ.ಆದರೆ ಇದೀಗ ದಿಢೀರ್ ಜ್ಞಾನೋದಯವಾಗಿದ್ದು ಹೆಂಡತಿ, ಮಕ್ಕಳನ್ನು ವೇದಿಕೆ ಹತ್ತಿಸಿಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ.ಕುಟುಂಬ ಸದಸ್ಯರನ್ನು ನಾವೇನು ಕರೆಯಬೇಡಿ ಎಂದು ಹೇಳಿದ್ದೇವೆಯೇ,ನಮ್ಮ ಬಗ್ಗೆ ಅದೇನೋ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದ್ದು ಶೀಘ್ರ ಬಿಚ್ಚಿಡಲಿ ಸ್ವೀಕರಿಸಲು ಸಿದ್ದರಿದ್ದೇವೆ.ಇಂತಹ ಬೆದರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ. ಶಾಸನ ಸಭೆಯಲ್ಲಿ ಯಾವ ಸಮುದಾಯದ ಜನರು ಬಂದಿದ್ದಾರೆ ಎಂಬುದನ್ನು ಗಮನಸಿ ಮಾತನಾಡುವ ತಂತ್ರಗಾರಿಕೆ ಆಟ ನಮ್ಮ ಬಳಿ ನಡೆಯುವುದಿಲ್ಲ.ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಕಾಲೇಜು ಬೇಡವೆಂದು ಅಧಿಕಾರಿಗಳು ಹೇಳಿದರೂ ಮಂಜೂರು ಮಾಡಿಕೊಟ್ಟವರು ಯಾರು,ಎಷ್ಟು ಅನುದಾನ ಕೊಟ್ಟಿದ್ದೇನೆ ಎನ್ನುವ ಪ್ರಶ್ನೆಗೆ ಮೊದಲು ನೀಡಲಿ ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ನಮ್ಮ ಸಹಮತವಿದ್ದು ಎಲ್ಲರನ್ನೂ ನಾವು ಗೌರವಿಸುತ್ತೇವೆ.ಆದರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಯಾವ ಸಮುದಾಯದ ಪರ ನಿಂತರೆ ಎಷ್ಟು ಮತಗಳು ಬರುತ್ತವೆ ಎನ್ನುವ ಲೆಕ್ಕಾಚಾರವಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆತರುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪಕ್ಷಾತೀತ ಹಾಗೂ ಜಾತ್ಯಾತೀತ ಹಿನ್ನಲೆಯಲ್ಲಿ ರೂಪಿಸುವ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿದ್ದು ಇಂತಹ ಸಮಾರಂಭಗಳಲ್ಲಿ ಸೇರುವ ಜನರ ಗುಂಪು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಟಾಂಗ್ ನೀಡಿದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ.ನಗರಸಭೆ ಕೆಲ ಜೆಡಿಎಸ್ ಸದಸ್ಯರು ಪಕ್ಷದ ವತಿಯಿಂದ ಆಯೋಜಿಸುತ್ತಿರುವ ಸಭೆ, ಸಮರಂಭ, ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಬೃಹತ್ ನಡೆದ ಸ್ವಾಭಿಮಾನಿ ಸಮಾವೇಶದಿಂದಲೂ ಅಂತರ ಕಾಯ್ದುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ.ಇಂತಹ ಸದಸ್ಯರ ಚಲನವಲನ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ.ಯಾರಾದರೂ ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದರಲ್ಲದೇ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಡುತ್ತಿರುವ ಏಳು ಸದಸ್ಯರು ನಮ್ಮ ಜತೆಗಿದ್ದು ವಿವಾದ ಮುಗಿದ ಅಧ್ಯಾಯವಾಗಿದ್ದು ಎತ್ತಿನಹೊಳೆ ನೀರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರಿಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಶೀಘ್ರವೇ ಎರಡನೇ ಪಟ್ಟಿಬಿಡುಗಡೆಯಾಗಲಿದ್ದು ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಾಲಿದ್ದಾರೆಂಬುದು ಬಹಿರಂಗವಾಗಲಿದೆ. ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಬಾಕಿಯಿದ್ದು ಸದ್ಯದಲ್ಲಿಯೇ ದಿನಾಂಕ ನಿಗದಿಪಡಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಪುರಸಭೆ ಮಾಜಿ ಅಧ್ಯಕ್ಷ ಪಿ.ದೇವಕುಮಾರ್,ತಾಪಂ ಮಾಜಿ ಸದಸ್ಯರಾದ ಹೊಸೂರು ಗಂಗಾಧರ್, ಶೇಖರನಾಯ್ಕ, ಬಸವಲಿಂಗಪ್ಪ, ಮುಖಂಡರಾದ ಹರ್ಷವರ್ಧನ್, ರಮೇಶ್, ಮಲ್ಲಿಕಾರ್ಜುನ್ ಇದ್ದರು. ನಗರಸಭೆ ಸದಸ್ಯ ಈಶಣ್ಣ ಗಂಗಾನಗರ ಬಡಾವಣೆಯ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಮನವಿ ಪತ್ರ ಸಲ್ಲಿಸಿದರು.