ಹಾಸನ: ನಗರದ ಬಿಟ್ಟಗೌಡನಹಳ್ಳಿ ವೃತ್ತ, ಆಲೂರು ರಸ್ತೆ ಬಳಿ ಇರುವ ಮುಖ್ಯ ರಾಜಕಾಲುವೆ ಸೇರಿದಂತೆ ಸುತ್ತಮುತ್ತಲ ಎಲ್ಲೆಡೆ ನೀರು ಸರಾಗವಾಗಿ ಹರಿಯುವಂತೆ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಎಚ್.ಪಿ. ಸ್ವರೂಪ್ ಸೂಚಿಸಿದರು.
ನಗರದ ನಗರದ ಬಿಟ್ಟಗೌಡನಹಳ್ಳಿ ವೃತ್ತ, ಆಲೂರು ರಸ್ತೆ ಬಳಿ ಇರುವ ಮುಖ್ಯ ರಾಜಕಾಲುವೆ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನಗರದ ಹೌಸಿಂಗ್ ಬೋರ್ಡ್ ಮತ್ತು ನಗರದ ಎಲ್ಲಾ ಭಾಗಗಳಿಂದ ಬರುವ ಕೊಳಚೆ ನೀರು ಹಾಗೂ ಒಳಚರಂಡಿಯ ನೀರು ಬಿಟ್ಟಗೌಡನಹಳ್ಳಿ ಭಾಗದಲ್ಲಿ ಶೇಖರಣೆ ಆಗುತ್ತದೆ. ಇದರಿಂದ ಬನಶಂಕರಿ ಲೇಔಟ್ ನಿವಾಸಿಗಳಿಗೆ ಮತ್ತು ಸುತ್ತಮುತ್ತಲ ಎಲ್ಲಾ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಇನ್ನು ಮಳೆ ಬಂದರೆ ಹೆಚ್ಚು ಸಮಸ್ಯೆ ಆಗಲಿದ್ದು, ರಾಜಕಾಲುವೆಯನ್ನು ತಾಂತ್ರಿಕವಾಗಿ ಯಾವ ರೀತಿ ಕಾಮಗಾರಿ ಆಗಬೇಕು ಎಂಬುದರ ಬಗ್ಗೆ ಪರಿಶೀಲಿಸಲಾಗಿದೆ. ರಾಜಕಾಲುವೆ ಒತ್ತುವರಿ ಸಂಬಂಧ ಸಮಸ್ಯೆ ಉಂಟಾಗಿದ್ದು, ದಯಮಾಡಿ ರಾಜಕಾಲುವೆಯನ್ನು ಯಾರು ಒತ್ತುವರಿ ಮಾಡಬೇಡಿ ಎಂದು ಮನವಿ ಮಾಡಿದರು.
ನಗರ ಮತ್ತು ಸುತ್ತಮುತ್ತಲ ಕಡೆಯಿಂದ ರಾಜಕಾಲುವೆ ಮೂಲಕ ಹರಿಯುವ ಸಂಪರ್ಕ ಇದೊಂದೆ ಇರುವುದರಿಂದ ನೀರು ಹರಿಯಲು ಯಾರು ರಾಜಕಾಲುವೆ ಒತ್ತುವರಿ ಮಾಡದೇ ಅಭಿವೃದ್ಧಿಗೆ ಸಹಕರಿಸಿ. ಮಳೆ ಬರುವ ಮೊದಲೇ ರಾಜಕಾಲುವೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ವೇಳೆ ನಗರಸಭೆಯ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.