ಮೈಸೂರು; ರೈತರ ಕೃಷಿ ಭೂಮಿ ಸ್ವಾಧೀನದಲ್ಲಿ ರಾಜಕಾರಣಿಗಳು, ಪುಡಿರಾಜಕಾರಣಿಗಳೇ ರಿಯಲ್ ಎಸ್ಟೇಟ್ ಏಜೆಂಟರು. ಇವರೆಲ್ಲ ಕೃಷಿಕರ ಬದುಕು ಕಿತ್ತುಕೊಳ್ಳುವ ದಲ್ಲಾಳಿಗಳು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು.
ನಗರದ ಧ್ವನ್ಯಾಲೋಕದಲ್ಲಿ ಭಾನುವಾರ ಆಯೋಜಿಸಿದ್ದ ‘ಕೃಷಿಯ ಸುತ್ತ ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಬಳಗದಿಂದ ಪ್ರಕಟಿಸಿರುವ ‘ಭೂಸ್ವಾಧೀನ ಒಳಸುಳಿಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ರೈತಾಪಿ ಕುಟುಂಬದಿಂದ ಬಂದಿರುವ ಜನಪ್ರತಿನಿಧಿಗಳೇ ಕೃಷಿಕರ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ. ಭೂಸ್ವಾಧೀನ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಗೊಳ್ಳಬೇಕಿದೆ ಎಂದರು.
ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಶೇ.70ರಷ್ಟು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. 5 ವರ್ಷದಲ್ಲಿ ಉದ್ದೇಶಿತ ಕಾರ್ಯ ಜಾರಿಯಾಗದಿದ್ದರೆ ಭೂಮಿಯನ್ನು ರೈತರಿಗೆ ಮರಳಿಸಬೇಕು ಎಂಬ ಕಾಯ್ದೆ ಆಶಯವನ್ನೇ ಕೈಬಿಡಲಾಗಿದೆ. ಇದರಿಂದಾಗಿ ರೈತರಿಂದ ಪ್ರತಿ ಎಕರೆಗೆ 40 ಲಕ್ಷ ರೂ.ನಂತೆ ಖರೀದಿಸಿ, 5 ವರ್ಷದ ಬಳಿಕ ಅದೇ ಭೂಮಿಯನ್ನು ಇನ್ನೊಬ್ಬ ಉದ್ದಿಮೆಗೆ 5 ಕೋಟಿ ರೂ.ಗೆ ಮಾರಲಾಗುತ್ತಿದೆ. ಕೈಗಾರಿಕೋದ್ಯಮಿಗಳು ದುಡ್ಡು ಮಾಡಿಕೊಳ್ಳಲು ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ದೂರಿದರು.
ವರುಣ ಬಳಿ ಕಂಪನಿಯೊಂದು ರೈತರಿಂದ ಪ್ರತಿ ಎಕರೆಗೆ 2 ಲಕ್ಷ ರೂ.ನಂತೆ ಭೂಮಿ ಖರೀದಿ ಮಾಡಿತ್ತು. ಅದೇ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) 47 ಲಕ್ಷ ರೂ. ಮಾರಲಾಗಿದೆ. ಇದೀಗ ಕೆಐಎಡಿಬಿ ರಿಯಲ್ ಎಸ್ಟೇಟ್‌ನ ಬ್ರೋಕರ್ ಸಂಸ್ಥೆಯಾಗಿದೆ. ಕೃಷಿ ಭೂಮಿ ಸ್ವಾಧೀನದಲ್ಲಿ ಶಾಸಕರು, ಸಂಸದರು ಸಹ ಕಮಿಷನ್ ಪಡೆಯುತ್ತಾರೆ. ಬ್ರಿಟಿಷರ ಕಾಲಕ್ಕಿಂತ ಕೆಟ್ಟ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡು ನಿರ್ಮಾಣವಾಗುವ ರಾಷ್ಟ್ರೀಯ ಹೆದ್ದಾರಿಗಳು ಅಸಮಾನತೆ ಸೃಷ್ಟಿಸುವ ರಹದಾರಿ ಆಗಿವೆ. ಸಾಮಾಜಿಕ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಬಂಡವಾಳದಾರರಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿ, ನೀರು, ತೆರಿಗೆಯಲ್ಲಿ ರಿಯಾಯಿತಿಯಷ್ಟೇ ನೀಡುತ್ತಿಲ್ಲ. ಅವರಿಗೆ ಮೂಲಸೌಕರ್ಯ ಕಲ್ಪಿಸಲು ಸಹ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಅವರಿಗಾಗಿ ರಸ್ತೆ, ವಿಮಾನ ನಿಲ್ದಾಣ ನಿರ್ಮಿಸುವುದೇ ಅಭಿವೃದ್ಧಿಯಾಗಿದೆ. ರೈತರ, ಬಡವರ ಬದುಕು ಬುಡಮೇಲು ಮಾಡುವುದೇ ಅಭಿವೃದ್ಧಿಯೇ? ಇದು ರಾಕ್ಷಸ ಅಭಿವೃದ್ಧಿಯೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಪಾಯಕಾರಿಯಾಗಿದೆ. ಆಹಾರ ಭದ್ರತೆಗೆ ಧಕ್ಕೆಯಾಗಲಿದೆ. ಇದೊಂದು ಭೂ ಕಬಳಿಕೆ ಕಾಯ್ದೆಯಾಗಿ ಪರಿವರ್ತನೆಯಾಗಿದೆ. ಸ್ವಾಧೀನದಿಂದ ಉಂಟಾಗುವ ಪರಿಸರ, ಸಾಮಾಜಿಕ ಪರಿಣಾಮಗಳು, ಭೂಮಿ ಕಳೆದುಕೊಂಡವರಿಗೆ ಮರು ವಸತಿ ಅಂಶಗಳನ್ನೆಲ್ಲ ಕೈಬಿಡಲಾಗಿದೆ. ನರಭಕ್ಷಕ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇದಕ್ಕೆ ಎಲ್ಲ ಪಕ್ಷದವರೂ ಬೆಂಬಲವಾಗಿ ನಿಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿಂತಕ ಕೆ.ಪಿ.ಸುರೇಶ್ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಲ್ಲು ಇಲ್ಲದ ಹಾವಿನಂತಾಗಿದೆ. ಭೂಸ್ವಾಧೀನದಲ್ಲಿ ಪಾಲನೆಯಾಗಬೇಕಿದ್ದ ಸಾಮಾಜಿಕ ಉದ್ದೇಶವನ್ನೇ ಹಾಳುಗೆಡವಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆ ಸರ್ಕಾರದಿಂದ ಖಾಸಗಿಯವರಿಗೆ ಮಾಡುವ ಅನುಕೂಲಕರ ಯೋಜನೆಯಾಗಿದೆ. ಕಾನೂನಗಳನ್ನೇ ಅಸಹಾಯಕ ಸ್ಥಿತಿಗೆ ತಂದು ನಿಲ್ಲಿಸಿ, ರೈತರಿಗೆ ನೆರವು ಸಿಗದಂತೆ ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಕೃತಿಯ ಲೇಖಕಿ ಗಾಯತ್ರಿ, ಚಿಂತಕರಾದ ಯತಿರಾಜ್, ಸಂತೋಷ್ ಕೌಲಗಿ, ಜಲತಜ್ಞ ರವಿಕುಮಾರ್, ರೈತ ಮುಖಂಡ ಹೊಸಕೋಟೆ ಬಸವರಾಜು, ಕಾರ್ಯಕ್ರಮ ಸಂಯೋಜಕ ಟಿ.ಜಿ.ಎಸ್.ಅವಿನಾಶ್ ಇನ್ನಿತರರು ಇದ್ದರು.