ನರಗುಂದ: ಉತ್ತರ ಕರ್ನಾಟಕದ ಸಂಸದರಿಗೆ ಯಾವುದೇ ನೈತಿಕತೆ ಇಲ್ಲ. ರಾಜಕಾರಣಿಗಳಿಂದಾಗಿ ಮಹದಾಯಿ ಮಹತ್ವದ ಯೋಜನೆಗೆ ಭಾರಿ ಹಿನ್ನಡೆ ಉಂಟಾಗಿದೆ ಎಂದು ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಆರೋಪಿಸಿದರು.
ಜು.16ಕ್ಕೆ ಮಹದಾಯಿ ಹೋರಾಟ ಆರಂಭಗೊಂಡು ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನರಗುಂದದ 1827ನೇ ದಿನದ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. ಮಹದಾಯಿ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ 2015ರಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಹೋರಾಟದಲ್ಲಿ ಇದುವರೆಗೆ 12 ರೈತರು ಪ್ರಾಣವನ್ನು ಅರ್ಪಿಸಿದ್ದಾರೆ. ಆದರೂ, ಇಂತಹ ಮಹತ್ವದ ಯೋಜನೆ ಅನುಷ್ಠಾನಗೊಳ್ಳದಿರುವುದು ನಮ್ಮೆಲ್ಲರ ದುರಾದೃಷ್ಟ. ಕೆಲ ರಾಜಕಾರಣಿಗಳು ಇಲ್ಲಿನ ಹೋರಾಟ ವೇದಿಕೆಯನ್ನು ಕಿತ್ತೆಸೆಯಲು ಮುಂದಾಗಿದ್ದರು. ನಮ್ಮ ಸಂಘಟನೆಯನ್ನು ಒಡೆದು ಹಾಕಿ, ಅವರಿಂದಲೇ ಈ ಮಹತ್ವದ ಯೋಜನೆ ಶೀಘ್ರ ಗತಿಯಲ್ಲಿ ಆಗುತ್ತಿದೆ ಎಂಬ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸೇನಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಮಾತನಾಡಿ, ಮಹದಾಯಿ ಹೋರಾಟಕ್ಕೆ ರಾಜಕಾರಣಿಗಳು ಅಥವಾ ರಾಜಕೀಯ ಪಕ್ಷಗಳಿಂದ ಹಣ ಪಡೆದಿಲ್ಲ. ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಯಾವುದೇ ಶಾಸಕ, ಸಂಸದರು ಹೋರಾಟಕ್ಕೆ ಕೈ ಜೋಡಿಸಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಆದರೂ, ಈ ಮಹತ್ವದ ಯೋಜನೆಗೆ ಇವರಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಗುರು ರಾಯನಗೌಡ್ರ, ರಾಘವೇಂದ್ರ ಗುಜಮಾಗಡಿ, ಈರಬಸಪ್ಪ ಹೂಗಾರ, ಶ್ರೀಶೈಲ ಮೇಟಿ, ಹನುಮಂತ ಮಡಿವಾಳರ ಮಾತನಾಡಿದರು. ಮಹದಾಯಿ ಹೋರಾಟ 6ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನರಗುಂದದ ವೀರ ಬಾಬಾಸಾಹೇಬ ಭಾವೆ ಹಾಗೂ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ರಾಮು ಸಾಬಳೆ, ನಿಂಗಪ್ಪ ನಾಯ್ಕರ, ವಿರೂಪಾಕ್ಷಿ ಪಾರನ್ನವರ, ವೆಂಕಪ್ಪ ಹುಜರತ್ತಿ, ಯಲ್ಲಪ್ಪ ಗುಡದರಿ, ಬಸಪ್ಪ ಗುಡದರಿ, ಅರ್ಜುನ ಮಾನೆ, ಅನಸವ್ವ ಶಿಂಧೆ, ಕಾಶವ್ವ ಉಳ್ಳಾಗಡ್ಡಿ, ಬಸವ್ವ ನಾಗನೂರ, ಪಾರವ್ವ ದಾನರಡ್ಡಿ, ರಿಯಾಜ್ ಪಠಾಣ, ಚನ್ನವ್ವ ಕರ್ಜಗಿ, ಹನುಮಂತಪ್ಪ ಅಣ್ಣಿಗೇರಿ, ರತ್ನಾ ಸವಳಭಾವಿ, ಜಯಪಾಲ ಮುತ್ತಿನ, ವಿಜಯಕುಮಾರ ಹೂಗಾರ, ಇತರರಿದ್ದರು.
ಪ್ರಮುಖ ನಿರ್ಣಯ: ಆಗಸ್ಟ್ ತಿಂಗಳೊಳಗಾಗಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು. ನವಿಲು ತೀರ್ಥ ಅಣೆಕಟ್ಟೆಯ ನೀರು ಸಂಗ್ರಹದ ಮಟ್ಟ ಹೆಚ್ಚಿಸಬೇಕು. ಈ ಹಿಂದಿನ ಸರ್ಕಾರದ ನಿರ್ಣಯದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿವಿಧ 9 ಪ್ರಮುಖ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಸಂವಿಧಾನಕ್ಕೆ ಅಪಪ್ರಚಾರ ಮಾಡಿರುವ ಆರೋಪದ ಮೇಲೆ ಸರ್ಕಾರದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂಬ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.