ನಾಗಮಂಗಲ: ಎಲ್.ಆರ್.ಶಿವರಾಮೇಗೌಡರಿಗೆ ಶಾಸಕ ಸುರೇಶ್‌ಗೌಡ ಮತ್ತು ಮಾಜಿ ಶಾಸಕ ಚಲುವರಾಯಸ್ವಾಮಿ ಬಾಕಿದಾರರೇ ಹೊರತು ನನ್ನ ತಂದೆ ಯಾರಿಗೂ ಬಾಕಿದಾರರಲ್ಲ. ಇದಕ್ಕೆ ನಾನೇ ಜೀವಂತ ಸಾಕ್ಷಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ ಹೇಳಿದರು.
ತಾಲೂಕಿನ ಹೊಣಕೆರೆ ಹೋಬಳಿಯ ಸೋಮನಳಮ್ಮದೇವಿ ದೇವಸ್ಥಾನ ಬಳಿ ಆಯೋಜಿಸಿದ್ದ ಚಿಣ್ಯ ಮತ್ತು ಹೊಣಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ತೆರೆಮರೆಹಿಂದೆ ನಡೆದಿರುವ ಸಂಗತಿಯನ್ನು ಹೇಳುವಂತಿಲ್ಲ. ಎಲುಬಿಲ್ಲದ ನಾಲಿಗೆಯಲ್ಲಿ ಶಿವರಾಮೇಗೌಡರ ಬಗ್ಗೆ ಇನ್ನೊಮ್ಮೆ ಮಾತನಾಡಿದರೆ ನಾವೇನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ದುಸ್ಥಿತಿ ನಮಗೆ ಬಂದಿಲ್ಲ. ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ಹಳೆಯ ಮನೆ ವಾಸ್ತು ಸರಿಯಿಲ್ಲದ ಕಾರಣದಂದಾಗಿಯೇ ಹೊಸ ಮನೆ ನಿರ್ಮಿಸುತ್ತಿದ್ದೇವೆ. ಆ ಮೂಲಕ ಜನರ ಮಧ್ಯೆ ಇದ್ದುಕೊಂಡು ಸಕ್ರಿಯ ರಾಜಕಾರಣ ಮಾಡಲು ನಿರ್ಧರಿಸಿದ್ದೇವೆ ಎಂದರು.